ಉಡುಪಿ ಕೃಷ್ಣಮಠ: ಮಳೆಯ ನಡುವೆಯೇ ವಿಟ್ಲಪಿಂಡಿ ಉತ್ಸವ ಸಂಪನ್ನ

ಉಡುಪಿ: ಕೊರೊನಾ ಕಾರಣದಿಂದ ಇದೇ ಮೊದಲ ಬಾರಿಗೆ ಭಕ್ತ ಸಮೂಹದ ಅನುಪಸ್ಥಿತಿಯಲ್ಲಿ ಶ್ರೀಕೃಷ್ಣನ ಜನ್ಮವನ್ನು ಸ್ಮರಿಸುವ, ಸಂಭ್ರಮಿಸುವ ವಿಟ್ಲಪಿಂಡಿ ಉತ್ಸವ ಉಡುಪಿ ಕೃಷ್ಣಮಠದಲ್ಲಿ ಇಂದು ಮಳೆಯ ಜೊತೆಯಲ್ಲಿ ಸರಳ ರೀತಿಯಲ್ಲಿ ಸಂಪ್ರದಾಯದಂತೆ ನೆರವೇರಿತು.

ಶ್ರೀಕೃಷ್ಣ ಮುಖ್ಯಪ್ರಾಣರಿಗೆ ಪರ್ಯಾಯ ಈಶಪ್ರಿಯತೀರ್ಥ ಶ್ರೀಪಾದರು ಪೂಜೆ ಸಲ್ಲಿಸಿದರು. ಬಳಿಕ ರಥಬೀದಿಯಲ್ಲಿ ವೈಭವದ ವಿಟ್ಲಪಿಂಡಿ ಮೆರವಣಿಗೆ ನಡೆಯಿತು. ಕೊರೊನಾ ಬಿಕ್ಕಟ್ಟಿನ ನಡುವೆ ಉತ್ಸವಕ್ಕೆ ಸುಮಾರು ನೂರರ ಆಸುಪಾಸಿನ ಸಂಖ್ಯೆಯಲ್ಲಿ ಭಕ್ತರು ಸಾಕ್ಷಿಯಾದರು.

 

ವಿಟ್ಲಪಿಂಡಿ ಉತ್ಸವದ ಅಂಗವಾಗಿ ಮಣ್ಣಿನಿಂದ ತಯಾರಿಸಿದ ಶ್ರೀಕೃಷ್ಣನ ಮೂರ್ತಿಯನ್ನು ಮಧ್ಯಾಹ್ನ 3.40ರ ಸುಮಾರಿಗೆ ಚಿನ್ನದ ಪಲ್ಲಕಿಯಲ್ಲಿರಿಸಿ ಮಂಗಳವಾದ್ಯದೊಂದಿಗೆ ವೇದಘೋಷ ಸಹಿತ ರಥಬೀದಿಗೆ ತರಲಾಯಿತು. ಬಳಿಕ ಪರ್ಯಾಯ ಶ್ರೀಗಳು ರಥಬೀದಿಯಲ್ಲಿ ಚಿನ್ನದ ರಥದಲ್ಲಿ ಮೃಣ್ಮಯಮೂರ್ತಿಯನ್ನಿಟ್ಟು ಆರತಿ ಬೆಳಗಿದರು. ಇನ್ನೊಂದು ರಥದಲ್ಲಿ ಶ್ರೀ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನದ ಉತ್ಸವ ಮೂರ್ತಿಗಳ ಉತ್ಸವ ನಡೆಯಿತು.

 

ಉತ್ಸವದಲ್ಲಿ ಪರ್ಯಾಯ ಅದಮಾರು ಮಠದ ಹಿರಿಯ ವಿಶ್ವಪ್ರಿಯತೀರ್ಥ ಸ್ವಾಮೀಜಿ, ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಪಲಿಮಾರು ಮಠದ ವಿದ್ಯಾಧೀಶತೀರ್ಥ ಶ್ರೀಪಾದರು, ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ವಿದ್ಯಾರಾಜೇಶ್ವರತೀರ್ಥ ಸ್ವಾಮೀಜಿ ಪಾಲ್ಗೊಂಡಿದ್ದರು.

ಮಡಿಕೆ ಒಡೆದು ಸಂಭ್ರಮಿಸಿದ ಗೊಲ್ಲರು:
ರಥಬೀದಿಯ ಸುತ್ತ ನೆಟ್ಟ ಗುರ್ಜಿಗಳಲ್ಲಿ ತೂಗು ಹಾಕಿದ ಮಡಕೆಗಳನ್ನು ಸಾಂಪ್ರದಾಯಿಕ ಗೊಲ್ಲರ ವೇಷ ಧರಿಸಿದವರು ಒಡೆಯುತ್ತ ಸಾಗಿದಂತೆ ಮೆರವಣಿಗೆಯೂ ಸಾಗಿತು. ಮೊದಲ ಬಾರಿಗೆ ರಥಬೀದಿಯ ಸುತ್ತ ಗೋವುಗಳನ್ನು ಕಟ್ಟಲಾಗಿತ್ತು. ಅಷ್ಟಮಿ ವೇಷಗಳಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದರಿಂದ ಮಠದ ವತಿಯಿಂದಲೇ ಎರಡು ಮಹಿಷಾಸುರ ವೇಷಗಳನ್ನು ಹಾಕಲಾಗಿತ್ತು.

ರಥಬೀದಿಗೆ ಒಂದು ಸುತ್ತ ರಥೋತ್ಸವ ನಡೆದ ಬಳಿಕ ಶ್ರೀಕೃಷ್ಣನ ಮಣ್ಣಿನ ಮೂರ್ತಿಯನ್ನು ಪರ್ಯಾಯ ಶ್ರೀಗಳು ಮಠದ ಮಧ್ವ ಸರೋವರದಲ್ಲಿ ವಿಸರ್ಜನೆ ಮಾಡಿದರು. ಇದರೊಂದಿಗೆ ಕೃಷ್ಣಜನ್ಮಾಷ್ಟಮಿ- ವಿಟ್ಲಪಿಂಡಿ ಉತ್ಸವ ಸಂಪನ್ನಗೊಂಡಿತು.