ಕಟಪಾಡಿ: ತಾಲೂಕು ಮಟ್ಟದ ವಿಶ್ವಕರ್ಮ ಜಯಂತಿ ಆಚರಣೆ

ಕಟಪಾಡಿ: ವಿಶ್ವಕರ್ಮರ ಕರ್ತವ್ಯ ಶ್ರದ್ಧೆಯ ಶಿಲ್ಪಿಗಳ ಕರ ಚಮತ್ಕಾರದಿಂದ ದೇವರನ್ನು ಮೂರ್ತಿ ಸ್ವರೂಪವಾಗಿ ಆರಾಧಿಸಲು ಸಾಧ್ಯವಾಗಿದೆ. ನೈಜ ವಾಸ್ತುಶಿಲ್ಪಿಗಳಾಗಿರುವ ವಿಶ್ವಕರ್ಮ ಸಮಾಜ ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ಅವರಂತಹ ನಾಯಕರನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ. ಕ್ಷೇತ್ರದ ಶಾಸಕನ ನೆಲೆಯಲ್ಲಿ ಇಲ್ಲಿನ ದೇಗುಲದ ಜೀರ್ಣೋದ್ಧಾರ ಧಾರ್ಮಿಕ ಕಾರ್ಯಕ್ಕೆ 10 ಲಕ್ಷ ರೂ. ಅನುದಾನ ಮತ್ತು ಸರಕಾರದ ಇತರ ಅನುದಾನವನ್ನು ಒದಗಿಸಲು ಬದ್ಧ ಎಂದು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.

ಸೆ. 17ರಂದು ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಸಭಾಭವನದಲ್ಲಿ ಕಾಪು ತಾಲೂಕು ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವರ ಆಶ್ರಯದಲ್ಲಿ ಜರಗಿದ ವಿಶ್ವಕರ್ಮ ಜಯಂತಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತಾಡಿದರು.

ಅವಿಭಜಿತ ದ.ಕ. ಜಾನಪದ ಶಾಖೆಯ ವಿಶ್ವ ವೈದಿಕ ಸಭಾ ಸಂಚಾಲಕ ಸಂದೀಪ್ ಕೆ. ಪುರೋಹಿತ್ ಉದ್ಯಾವರ ಧಾರ್ಮಿಕ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಎರಕಶಿಲ್ಪಿ ವಿಟ್ಠಲ ಆಚಾರ್ಯ ಬಿಳಿಯಾರು, ಕಾಷ್ಠಶಿಲ್ಪಿ ಜಯರಾಮ ಆಚಾರ್ಯ ಪಡುಬಿದ್ರಿ, ಶಿಲಾಶಿಲ್ಪಿ ಕೇಶವ ಆಚಾರ್ಯ ಗುಡ್ಡೆಅಂಗಡಿ, ಲೋಹಶಿಲ್ಪಿ ರಾಜೀವ ಆಚಾರ್ಯ ಹಿರಿಯಡಕ, ಸ್ವರ್ಣಶಿಲ್ಪಿ ಪಿ. ಗೋವಿಂದ ಆಚಾರ್ಯ ಕಾಪು ಅವರನ್ನು ಸನ್ಮಾನಿಸಲಾಯಿತು.

ಕಟಪಾಡಿ ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಎಸ್. ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ವಿಶ್ವ ಬ್ರಾಹ್ಮಣ ಯುವಸಂಘಟನೆ ಕಾಪು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸುಧಾಕರ ಆಚಾರ್ಯ ಬಿಳಿಯಾರು, ಕಾಪು ತಾಲೂಕು ಮಟ್ಟದ ರಾಷ್ಟ್ರೀಯ ಹಾಗೂ ನಾಡಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಕಟಪಾಡಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಮೊಕ್ತೇಸರರು, ವಿಶ್ವಬ್ರಾಹ್ಮಣ ಯುವಸಂಘಟನೆ ಕಾಪು ಇದರ ಉಪಾಧ್ಯಕ್ಷರು, ವಲಯ ಅಧ್ಯಕ್ಷರು, ಪ್ರಮುಖರು, ಗ್ರಾಮ ಮೊಕ್ತೇಸರರು, ಸಂಘ ಸಂಸ್ಥೆಗಳು, ಉಪಸ್ಥಿತರಿದ್ದರು.

ಕಟಪಾಡಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಎರಡನೇ ಮೊಕ್ತೇಸರ ಬಾಲಕೃಷ್ಣ ಎಸ್. ಆಚಾರ್ಯ ಬೆಳಪು ಸ್ವಾಗತಿಸಿದರು. ಆಡಳಿತ ಮೊಕ್ತೇಸರ ನವೀನ್ ಆಚಾರ್ಯ ಪಡುಬಿದ್ರಿ ಪ್ರಸ್ತಾವನೆಗೈದರು. ವಿಶ್ವಬ್ರಾಹ್ಮಣ ಯುವಸಂಘಟನೆ ಕಾಪು ವಿಧಾನಸಭಾ ಕ್ಷೇತ್ರ ಇದರ ಸಂಚಾಲಕ ಮುರುಳೀಧರ ಆಚಾರ್ಯ ಇನ್ನಂಜೆ ವಂದಿಸಿದರು. ಪ್ರಧಾನ ಕಾರ್ಯದರ್ಶಿ ರತ್ನಾಕರ ಕುರ್ಕಾಲು ನಿರೂಪಿಸಿದರು.