ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಶ್ರದ್ಧಾಂಜಲಿ ಸಭೆ

ಉಡುಪಿ: ಶ್ರೀನಗರ-ಜಮ್ಮು ಹೆದ್ದಾರಿಯ ಅವಂತಿಪೋರಾ ಎಂಬಲ್ಲಿ ಉಗ್ರರ ದಾಳಿಗೆ ತುತ್ತಾಗಿ ಹುತಾತ್ಮರಾದ ಕೇಂದ್ರ ಮೀಸಲು ಪೊಲೀಸ್‌ ಪಡೆ ಯೋಧರಿಗೆ ವಿಶ್ವ ಹಿಂದೂ ಪರಿಷತ್ ವತಿಯಿಂದ ಅಜ್ಜರಕಾಡಿನ ಹುತಾತ್ಮ ಸ್ಮಾರಕದಲ್ಲಿ ಶುಕ್ರವಾರ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಹುತಾತ್ಮ ಸ್ಮಾರಕಕ್ಕೆ ಪುಷ್ಪಾರ್ಚನೆ ಸಲ್ಲಿಸಿ ವಿಶ್ವ ಹಿಂದೂ ಪರಿಷತ್ತಿನ ಕಾರ್ಯದರ್ಶಿ ಪ್ರಮೋದ್ ಶೆಟ್ಟಿ ಮಂದಾರ್ತಿ ಮಾತನಾಡಿ, ದೇಶವನ್ನು ನುಚ್ಚುನೂರು ಮಾಡಬೇಕು. ದೇಶದ ಅಸ್ತಿತ್ವವನ್ನು ದುರ್ಬಲಗೊಳಿಸಬೇಕೆಂದು ಉಗ್ರರು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ದೇಶದ ಜನತೆ ಅವಕಾಶ ನೀಡಬಾರದು. ದೇಶದ ಗಡಿ ಕಾಯುವ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದರು.
ಈ ಕೃತ್ಯದ  ಹಿಂದೆ ಪಾಕಿಸ್ತಾನದ ಕೈವಾಡವಿದೆ. ಉಗ್ರರ ಈ ನೀಚಾಕೃತ್ಯವನ್ನು ಪ್ರತಿಯೊಬ್ಬ ಭಾರತೀಯರು ಖಂಡಿಸಬೇಕು ಎಂದು ಕರೆನೀಡಿದರು.
 
ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ಮಾತನಾಡಿ, ಕಾಶ್ಮೀರದಲ್ಲಿ ಉಗ್ರರರು ನಡೆಸಿದ ಬಾಂಬ್ ಸ್ಫೋಟ ದಾಳಿಯ ವಿರುದ್ಧ ಪ್ರಧಾನಿ ಮೋದಿ ಅವರು ಈಗಾಗಲೇ ಹೋರಾಟದ ಕಹಳೆ ಊದಿದ್ದಾರೆ. ಇದಕ್ಕೆ ನಮ್ಮ ದೇಶದ ಯುವಜನರು ಒಗ್ಗಟ್ಟಿನಿಂದ ಬೆಂಬಲ ನೀಡಬೇಕು. ಆ ಮೂಲಕ ಉಗ್ರರ ಕೃತ್ಯವನ್ನು ಖಂಡಿಸಿ, ದೇಶದ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ನಿವೃತ್ತ ಯೋಧ ಗಣೇಶ್ ನಾಯ್ಕ್, ತಾ.ಪಂ. ಅಧ್ಯಕ್ಷ ನಳಿನಿ ಪ್ರದೀಪ್ ರಾವ್, ವಿಎಚ್ ಪಿ ನಗರ ಅಧ್ಯಕ್ಷ ಸಂತೋಷ್ ಕುಮಾರ್ ಬೊಳ್ಜೆ, ಅಲೆವೂರು ಗ್ರಾ.ಪಂ. ಅಧ್ಯಕ್ಷ ಶ್ರೀಕಾಂತ ನಾಯಕ್, ವಿಎಚ್ ಪಿ ಮುಖಂಡ ಸತೀಶ್ ಕುಮಾರ್ ಮೊದಲಾದವರು ಪಾಲ್ಗೊಂಡಿದ್ದರು.