ಉಡುಪಿ : ತಾಯಿ ಅನಾರೋಗ್ಯ ಪೀಡಿತೆ ಎಂದು ಆಕೆಯ ಅಂಗವಿಕಲೆ ಮಗಳನ್ನು ಹೆಬ್ರಿ ರಾಘವೇಂದ್ರ ಆಸ್ಪತ್ರೆಯಲ್ಲಿ ದಾಖಲಿಸಿ ಕೈ ತೊಳೆದುಕೊಂಡ ಶಂಕರನಾರಾಯಣ ಮೂಲದ ಕುಟುಂಬವೊಂದು ಇದೀಗ ಜಾಣ ಕುರುಡು ತೋರಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ವಿದ್ಯಮಾನ ನಡೆದಿದ್ದು, ಆಪದ್ಭಾಂಧವ ವಿಶು ಶೆಟ್ಟಿ ಅವರು ಇದೀಗ ಎರಡನೇ ಬಾರಿಗೆ ಸ್ಪಂದಿಸಿ ಯುವತಿಯನ್ನು ಕಾರ್ಕಳ ಆಯ್ಯಪ್ಪನಗರದಲ್ಲಿರುವ ವಿಜೇತ ವಿಶೇಷ ಶಾಲೆ ಮತ್ತು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದಾರೆ.
ಭಿನ್ನ ಸಾಮರ್ಥ್ಯ ಅಂಗವಿಕಲೆ ಯುವತಿಯ ಬಗ್ಗೆ ಕುಟುಂದವರಿಗೆ ಪೋನ್ ಮೂಲಕ ಸಂಪರ್ಕಿಸಿದರೆ ಯುವತಿಗೂ ನಮಗೂ ಸಂಬಂಧವಿಲ್ಲ. ನಮಗೆ ಪೋನಾಯಿಸಬೇಡಿ ಎಂದು ಉಢಾಪೆಯಾಗಿ ವರ್ತಿಸುತ್ತಿರುವುದು ನಡೆದಿದೆ. ಯುವತಿಯ ಜವಾಬ್ದಾರಿಯನ್ನು ಹೊರಲು ಸಂಬಂಧಿಕರು ಮುಂದಾಗಬೇಕು, ತಪ್ಪಿದ್ದಲ್ಲಿ ಕಾನೂನು ಕ್ರಮಕೈಗೊಳ್ಳುವುದಾಗಿ ವಿಶು ಶೆಟ್ಟಿ ತಿಳಿಸದ್ದಾರೆ.
ಪ್ರಕರಣದ ಹಿನ್ನಲೆ : ಶಂಕರನಾರಾಯಣದ ಸಂಗೀತಾ ಶೆಟ್ಟಿ (33) ಎಂಬಾಕೆ ಭಿನ್ನ ಸಾಮರ್ಥ್ಯ ಅಂಗವಿಕಲತೆ ಹೊಂದಿದ್ದು, ಸ್ವತಂತ್ರವಾಗಿ ನಡೆದಾಡುವ ಸ್ಥಿತಿಯಲ್ಲಿಲ್ಲ. ಈಕೆಯ ತಾಯಿ ಅನಾರೋಗ್ಯದಲ್ಲಿದ್ದು, ಸಂಗೀತಾಳನ್ನು ಆರೈಕೆ ಮಾಡುವವರಿಲ್ಲ ಎಂದು ಸಂಬಂಧಿಕರು ಉಡುಪಿಯ ಸಖಿ ಸೆಂಟರ್ಗೆ ದಾಖಲಿಸಿದ್ದರು. ಸಖಿ ಸೆಂಟರನಲ್ಲಿ ಪ್ರಕರಣದ ಅನುಗುಣವಾಗಿ ಕೇವಲ 5 ದಿನಗಳ ಆಶ್ರಯ ನೀಡಲಾಗುವುದರಿಂದ ಮಾಹಿತಿ ಪಡೆದ ವಿಶು ಶೆಟ್ಟಿ ಅವರು ರಾಘವೇಂದ್ರ ಆಸ್ಪತ್ರೆಯ ವೈದ್ಯರಾದ ಐತಾಳ್ ದಂಪತಿಯನ್ನು ಸಂಪರ್ಕಿಸಿ ಅವರ ಆಸ್ಪತ್ರೆಯಲ್ಲಿ ಆಶ್ರಯ ನೀಡುವಂತೆ ಕೋರಿದ್ದರು. ಇದಕ್ಕೆ ಸ್ಪಂದಿಸಿದ ಐತಾಳ್ ದಂಪತಿ 6 ತಿಂಗಳ ಕಾಲ ಸಂಪೂರ್ಣ ಉಚಿತ ಯುವತಿಗೆ ಔಷಧೋಪಾಚಾರ ಸಹಿತ ಆಶ್ರಯ ನೀಡಲು ಒಪ್ಪಿರುವುದರಿಂದ ಕುಟುಂಬಿಕರ ಮುಖಾಂತರ ಆಸ್ಪತ್ರೆಗೆ ದಾಖಲಿಸಿರುತ್ತಾರೆ.ಯುವತಿ ಆಸ್ಪತ್ರೆ ಸೇರಿ ಒಂದುವರೆ ವರ್ಷ ಕಳೆದರೂ ಸಂಬಂಧಿಕರು ಕನಿಷ್ಟ ಆಕೆಯ ಕಾಳಜಿ ವಿಚಾರಿಸುವ ಪ್ರಯತ್ನವನ್ನೇ ಮಾಡಿಲ್ಲ. ಅವರು ನೀಡಿದ ದೂರವಾಣಿ ಸಂಖ್ಯೆಗೆ ಮಹಿಳಾ ಸಹಾಯವಾಣಿ, ಪೊಲೀಸರ ಮೂಲಕ ಪೋನಾಯಿಸಿದರೆ ` ಯುವತಿಗೂ ನಮಗೂ ಸಂಬಂಧವಿಲ್ಲ, ನಮಗೆ ತೊಂದರೆ ಕೊಡಬೇಡಿ ‘ ಎನ್ನುವ ಉಢಾಪೆ ಮಾತುಗಳನ್ನಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ವಿಶು ಶೆಟ್ಟಿ ನೀಡಿದ್ದಾರೆ.
ಮತ್ತೆ ಸ್ಪಂದಿಸಿದ ವಿಶು ಶೆಟ್ಟಿ : ಯುವತಿಗೆ ಆಶ್ರಯ ನೀಡಲು ಸಂಬಂಧಿಕರು ಮುಂದೆ ಬಾರದಿದ್ದರೂ ವಿಶು ಶೆಟ್ಟಿ ಅವರು ಎರಡನೇ ಬಾರಿಗೆ ಸ್ಪಂದಿಸಿದ್ದಾರೆ. ಕಾರ್ಕಳದ ಸಾಂತ್ವನ ಕೇಂದ್ರದ ಶ್ರೀಮತಿ ಯಶೋಧಾ ಶೆಟ್ಟಿ ಅವರ ನೆರವಿನಿಂದ ಕಾರ್ಕಳ ಆಯ್ಯಪ್ಪನಗರದ ವಿಜೇತ ವಿಶೇಷ ಶಾಲೆಯನ್ನು ಸಂಪರ್ಕಿಸಿದಾಗ ಸಮಾಜ ಸೇವೆಯ ಬಗ್ಗೆ ತುಡಿತ ಹೊಂದಿರುವ ಅಸಹಾಯಕ ಭಿನ್ನ ಸಾಮರ್ಥ್ಯ ಅಂಗವಿಕಲೆ ಹೆಣ್ಣು ಮಗಳಿಗೆ ಆಶ್ರಯ ಸಿಗಬೇಕು ಎಂಬ ಸದುದ್ದೇಶದಿಂದ ಕೇಂದ್ರದ ಮುಖ್ಯಸ್ಥೆ ಶ್ರೀಮತಿ ಕಾಂತಿ ಹರೀಶ್ ಆಶ್ರಯ ನೀಡಲು ಒಪ್ಪಿ ಮಾನವೀಯತೆ ಮೆರೆದಿದ್ದಾರೆ.
ಸಂಬಂಧಿಕರ ವರ್ತನೆಗೆ ಆಕ್ರೋಶ : ಮಾನವೀಯ ನೆಲೆಯಲ್ಲಿ ಯುವತಿಗೆ ಔಷಧೋಪಚಾರ ಸಹಿತ ಸುಮಾರು ಒಂದುವರೆ ವರ್ಷಗಳ ಕಾಲ ಉಚಿತವಾಗಿ ಆಶ್ರಯ ನೀಡಿದ ಐತಾಳ್ ವೈದ್ಯ ದಂಪತಿ ಸೇರಿದಂತೆ ಸೇವಾ ಸಂಸ್ಥೆಗಳ ಮೇಲೆ ಉಢಾಪೆ ವರ್ತನೆ ತೋರಿದ ಯುವತಿಯ ಸಂಬಂಧಿಕರ ವರ್ತನೆ ಖಂಡನೀಯ. ಯುವತಿಯ ಆರೈಕೆ ಸಂಬoಧಿಕರ ಜವಾಬ್ದಾರಿಯೇ ಹೊರತು ಸೇವಾ ಸಂಸ್ಥೆ ಅಥವಾ ಸಮಾಜ ಸೇವಕರದಲ್ಲ ಎಂಬುದನ್ನು ಅವರು ಮರೆಯಬಾರದು.ಅಲ್ಲದೆ ಆಕೆಗೆ ಬರುವ ಸರಕಾರದ ಮಾಶಾಷನದ ಬಗ್ಗೆಯು ಕುಟುಂಬದವರಿಂದ ಮಾಹಿತಿ ಇಲ್ಲ,ಕೂಡಲೇ ಅವರು ಉಡುಪಿಯ ಸಖಿ ಸೆಂಟರ್ ಅಥವಾ ಕಾರ್ಕಳದ ವಿಜೇತ ವಿಶೇಷ ಶಾಲೆಯನ್ನು ಸಂಪರ್ಕಿಸಿ ಮುಂದಿನ ಜವಾಬ್ದಾರಿಯನ್ನು ಹೊರಲು ಮುಂದಾಗಬೇಕು ಅಥವಾ ಕುಟುಂಬ ಸ್ಪಂದಿಸಿದರೆ ಮುಂದೆಯೂ ಆಕೆಯ ಜವಾಬ್ದಾರಿ ತೆಗೆದುಕೊಳ್ಳಲು ಬದ್ಧ ಇದೇ ರೀತಿ ಉಢಾಪೆ ವರ್ತನೆ ತೋರಿದಲ್ಲಿ ಕಾನೂನು ಕ್ರಮಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಈ ಮೂಲಕ ಸೂಚಿಸಿದ್ದಾರೆ.