ಪೌಷ್ಟಿಕ ಆಹಾರವೂ ವಿಷವಾಗಬಹುದು ಜೋಕೆ ! ವಿರುದ್ದ ಆಹಾರ ಸೇವನೆ ಬಗ್ಗೆ ಡಾ.ಹರ್ಷಾ ಕಾಮತ್ ಹೇಳ್ತಾರೆ ಕೇಳಿ

ಆಯುರ್ವೇದದಲ್ಲಿ ಆಹಾರಕ್ಕೆ ಅಪಾರ ಮಹತ್ವವಿದೆ. ಆರೋಗ್ಯಕ್ಕೆ ಪೂರಕವಾದ ಆಹಾರ ಕ್ರಮವು ನಮ್ಮ ಆಯುಷ್ಯವನ್ನು ಹೆಚ್ಚಿಸುತ್ತದೆ. ಆದರೆ ನಿಮಗೆ ಗೊತ್ತಾ? ನಾವು ಸೇವಿಸುವ ಪೌಷ್ಟಿಕ ಆಹಾರ ಕೂಡ ವಿಷವಾಗಿ ಪರಿಣಮಿಸಬಹುದು,ಮತ್ತು ನಮ್ಮಆರೋಗ್ಯಕ್ಕೆ ಮಾರಕವಾಗಬಲ್ಲದು! ಹೌದು ಇದು ನಿಜ. ಇದರ ಉಲ್ಲೇಖ ಆಯುರ್ವೇದದಲ್ಲಿದೆ. ಬೇರೆಬೇರೆ ಕಾರಣಗಳಿಂದ ದಿನ ನಿತ್ಯದಲ್ಲಿ ಸೇವಿಸುವ ಆಹಾರವೇ ನಮ್ಮ ದೇಹದೊಳಗೆ ನಂಜಾಗಿ ಪರಿವರ್ತಿತವಾಗಿ ಕಾಲಕ್ರಮೇಣ ಬೇರೆ ಬೇರೆ ರೋಗಗಳನ್ನು ಉಂಟುಮಾಡಬಲ್ಲದು. ಇದನ್ನು ವಿರುದ್ಧ ಅನ್ನ ಅಥವಾ ವಿರುದ್ಧ ಆಹಾರ ಅಂತ ಕರೆಯುತ್ತೇವೆ.

ಏನು ಹೇಳುತ್ತೆ ಆಯುರ್ವೇದ?

 ಆರೋಗ್ಯಪೂರ್ಣ ಜೀವನಕ್ಕಾಗಿ ಅನೇಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಆಹಾರ ಕ್ರಮವನ್ನು ಆಯುರ್ವೇದದಲ್ಲಿ ವಿವರಿಸಲಾಗಿದೆ. ಅವುಗಳಲ್ಲಿ ಮುಖ್ಯವಾಗಿ, ಆಹಾರದ ಪ್ರಕಾರ, ವಯಸ್ಸು, ಜೀರ್ಣಶಕ್ತಿ, ಆಹಾರ ಪದಾರ್ಥಗಳ ಬಳಕೆ, ಪಾಕವಿಧಿಯಷ್ಟೇ ಅಲ್ಲದೆ ಸೇವನೆಯ ಕ್ರಮದಲ್ಲಾಗುವ ದೋಷವನ್ನೂ ವಿವರಿಸಲಾಗಿದೆ.ಇದನ್ನೇ ಆಯುರ್ವೇದದ ಭಾಷೆಯಲ್ಲಿ ದೇಶ ವಿರುದ್ಧ, ಕಾಲವಿರುದ್ಧ, ಅಗ್ನಿವಿರುದ್ಧ, ದೋಷವಿರುದ್ಧ, ಕರ್ಮವಿರುದ್ಧ, ಮಾನವಿರುದ್ಧ, ಸಂಯೋಗ ವಿರುದ್ಧ, ಸಂಸ್ಕಾರ ವಿರುದ್ಧ ಹೀಗೆ ಹಲವು ವಿಧಗಳಾಗಿ ಹೇಳಲಾಗಿದೆ.

ನೀವು ದಿನನಿತ್ಯ ಸೇವಿಸುವ ವಿರುದ್ದ ಆಹಾರದ ಲೀಸ್ಟ್ ಇಲ್ಲಿದೆ ನೋಡಿ: 

 • ಮೀನು ಮತ್ತು ಹಾಲು
 • ಬಿಸಿ ಜೇನು ತುಪ್ಪ
 • ಚಳಿಗಾಲದಲ್ಲಿ ತಣ್ಣಗಿನ ಪದಾರ್ಥ ಸೇವಿಸುವುದು
 • ಬೇಸಿಗೆ ಕಾಲದಲ್ಲಿ ಅಧಿಕ ಬಿಸಿ ಪದಾರ್ಥ ಸೇವಿಸುವುದು
 • ಊಟದ ಕೊನೆಯಲ್ಲಿ ಸ್ವೀಟ್ ತಿನ್ನುವುದು
 • ಬಿಸಿ ಪದಾರ್ಥ ಸೇವಿಸಿದ ಮೇಲೆ ತಣ್ಣಗಿನ ನೀರು ಸೇವಿಸುವುದು
 • ಹಾಲನ್ನು ಹುಳಿ ಪದಾರ್ಥದ ಜೊತೆ ಸೇವಿಸುವುದು
 • ರಾತ್ರಿ ಮೊಸರಿನ ಬಳಕೆ
 • ಪಿಷ್ಟ ಪದಾರ್ಥಗಳಾದ ಬ್ರೆಡ್, ಬಟಾಟೆ, ಬಾಳೆಹಣ್ಣಿನ ಜೊತೆ ಹುಳಿಯಾದ ಟೊಮೆಟೊ ಅಥವಾ ನಿಂಬೆ ಹಣ್ಣನ್ನು ಸೇವಿಸುವುದು.
 • ಕೋಲ್ಡ್ ಸ್ಟೋರೇಜ್ ನಲ್ಲಿರಿಸಿದ ಪದಾರ್ಥಗಳು, ಐಸ್ ಕ್ರೀಮ್ ಇತ್ಯಾದಿ
 • ಸಮ ಪ್ರಮಾಣದಲ್ಲಿ ತುಪ್ಪ ಹಾಗೂ ಜೇನು ತುಪ್ಪದ ಬಳಕೆ.

ವಿರುದ್ಧ ಆಹಾರ ಸೇವನೆಯಿಂದ ಅಂಧತ್ವ ಬರುತ್ತೆ ಜೋಕೆ! 

 • ಅಜೀರ್ಣ, ಬೇರೆಬೇರೆ ರೀತಿಯ ತ್ವಚೆಯ ವಿಕಾರಗಳು, ಪಿತ್ತಕೋಶದ ಕಾಯಿಲೆ, ಜಠರ ಸಂಬಂಧಿ ಸಮಸ್ಯೆ,ಹೊಟ್ಟೆ ಉಬ್ಬರ, ಸಂಧಿಗಳಲ್ಲಿ ಉರಿಯೂತದ ಸಮಸ್ಯೆ, ಕ್ಯಾನ್ಸರ್ ನಂತಹ ಸಮಸ್ಯೆಗಳು ತಲೆದೋರಬಹುದು.
 • ವಿರುದ್ಧ ಆಹಾರ ಸೇವನೆಯಿಂದ ಉಂಟಾದ ಸಮಸ್ಯೆಯ ನಿವಾರಣೆ ಅಷ್ಟೊಂದು ಸುಲಭವಲ್ಲ. ಆಯುರ್ವೇದಿಯ ಪಂಚಕರ್ಮ ಚಿಕಿತ್ಸೆ ಈ ಸಂದರ್ಭದಲ್ಲಿ ಅತ್ಯಗತ್ಯ. ನಂಜಿನ ಪದಾರ್ಥಗಳನ್ನು ದೇಹದಿಂದ ಹೊರಹಾಕಲು, ವಯಸ್ಸು ಮತ್ತು ಕಾಲಮಾನಕ್ಕನುಗುಣವಾಗಿ, ವಮನ, ವಿರೇಚನ ಮತ್ತು ಬಸ್ತಿ ಮುಂತಾದ ಶೋಧನ ಕ್ರಮವನ್ನು ವೈದ್ಯರ ಸಲಹೆ ಸೂಚನೆಯ ಜೊತೆ ಪಡೆದುಕೊಳ್ಳಬಹುದು..
 • ದೀರ್ಘಕಾಲೀನ ಔಷಧ ಸೇವನೆ ಕೂಡ ಮಾಡಬೇಕಾಗಬಹುದು.

ಈಗ ಗೊತ್ತಾಯ್ತಾ ವಿರುದ್ದ ಆಹಾರ ಸೇವೆ ಅಂದ್ರೆ ಏನು ಅಂತ? ಇನ್ನಾದರೂ ವಿರುದ್ದ ಆಹಾರ ಸೇವನೆ ಮಾಡೋದ್ ಬಿಟ್ ಬಿಡಿ.ಇಲ್ಲಾಂದ್ರೆ ಅನಾರೋಗ್ಯಕ್ಕೆ ನಾವೇ ದಾರಿಮಾಡಿಕೊಟ್ಟಂತಾಗುತ್ತೆ ಎಚ್ಚರ.

ಡಾ.ಹರ್ಷಾಕಾಮತ್