ಚೆನ್ನೈ: ಐಪಿಲ್ ಕ್ರಿಕೆಟ್ ನ ಹುಚ್ಚು ಅಭಿಮಾನವು ಯುವಕನೊಬ್ಬನ ಹತ್ಯೆಯಲ್ಲಿ ದುರಂತ ಅಂತ್ಯ ಕಂಡಿದೆ. ತಮಿಳುನಾಡಿನಲ್ಲಿ ರೋಹಿತ್ ಶರ್ಮಾ ಬೆಂಬಲಿಗನನ್ನು ವಿರಾಟ್ ಅಭಿಮಾನಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಘಟನೆಯಲ್ಲಿ 24 ವರ್ಷದ ಪಿ ವಿಘ್ನೇಶ್ ಅನ್ನು ಎಸ್ ಧರ್ಮರಾಜ್ ಎನ್ನುವವನು ಕೊಲೆಮಾಡಿದ್ದಾನೆ. ಈ ಇಬ್ಬರೂ ಅರಿಯಲೂರು ಜಿಲ್ಲೆಯ ಪೊಯ್ಯೂರು ಗ್ರಾಮದವರು. ವಿಘೇಶ್ ಮುಂಬೈ ಇಂಡಿಯನ್ ಅಭಿಮಾನಿಯಾಗಿದ್ದರೆ, ಧರ್ಮರಾಜ್ ಆರ್.ಸಿ.ಬಿಯ ಕಟ್ಟರ್ ಅಭಿಮಾನಿ.
ಈ ಇಬ್ಬರೂ ಕೂಡಾ ಮದ್ಯ ಸೇವಿಸಿದ್ದರು. ಆರಂಭಿಕ ತನಿಖೆಯ ಪ್ರಕಾರ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ವಿಘ್ನೇಶ್ ಮುಂಬೈ ಇಂಡಿಯನ್ಸ್‌ಗೆ ಬೆಂಬಲ ನೀಡುತ್ತಿದ್ದರೆ, ಧರ್ಮರಾಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬೆಂಬಲಿಗರಾಗಿದ್ದರು ಎಂದು ಕೀಲಪಾಲೂರು ಪೊಲೀಸರು ತಿಳಿಸಿದ್ದಾರೆ.
ಅವರ ಚರ್ಚೆಯ ಸಂದರ್ಭದಲ್ಲಿ ವಿಘ್ನೇಶ್ ಆರ್‌ಸಿಬಿ ಮತ್ತು ವಿರಾಟ್ ಕೊಹ್ಲಿಯನ್ನು ಲೇವಡಿ ಮಾಡಿದ್ದರು. ತೊದಲುವ ಸಮಸ್ಯೆ ಹೊಂದಿದ್ದ ಧರ್ಮರಾಜ್ ನನ್ನು ವಿಘೇಶ್ ಅಪಹಾಸ್ಯ ಮಾಡುತ್ತಿದ್ದ. ಅಂದು ಮಾತ್ರ ಆರ್‌ಸಿಬಿ ತಂಡವನ್ನು ಧರ್ಮರಾಜ್‌ನ ತೊದಲುವಿಕೆಗೆ ಹೋಲಿಸಿ ಟೀಕೆ ಮಾಡಿದ್ದ. ಇದರಿಂದ ಕುಪಿತಗೊಂಡ ಧರ್ಮರಾಜ್ ವಿಘ್ನೇಶ್ ಮೇಲೆ ಬಾಟಲಿಯಿಂದ ಹಲ್ಲೆ ನಡೆಸಿ ನಂತರ ಕ್ರಿಕೆಟ್ ಬ್ಯಾಟ್ ನಿಂದ ತಲೆಗೆ ಹೊಡೆದಿದ್ದಾನೆ. ಆ ಬಳಿಕ ಧರ್ಮರಾಜ್ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಮಲ್ಲೂರು ಬಳಿಯ ಸಿಡ್ಕೋ ಇಂಡಸ್ಟ್ರಿಯಲ್ ಎಸ್ಟೇಟ್ ಬಳಿಯ ಬಯಲು ಪ್ರದೇಶದಲ್ಲಿ ವಿಘ್ನೇಶ್ ಮತ್ತು ಧರ್ಮರಾಜ್ ಕ್ರಿಕೆಟ್ ಕುರಿತು ಚರ್ಚೆ ನಡೆಸುತ್ತಿದ್ದಾಗ, ಧರ್ಮರಾಜ್ ಬಾಟಲಿ ಮತ್ತು ಕ್ರಿಕೆಟ್ ಬ್ಯಾಟ್‌ನಿಂದ ವಿಘ್ನೇಶ್ ಮೇಲೆ ಹಲ್ಲೆ ನಡೆಸಿದ್ದಾನೆ. ಮರುದಿನ ಬೆಳಗ್ಗೆ ಸಿಡ್ಕೊ ಕಾರ್ಖಾನೆಗೆ ತೆರಳುತ್ತಿದ್ದ ಕಾರ್ಮಿಕರ ಗುಂಪೊಂದು ವಿಘ್ನೇಶ್ ಶವವನ್ನು ಕಂಡು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಐಟಿಐ ಮುಗಿಸಿರುವ ವಿಘ್ನೇಶ್ ಸಿಂಗಾಪುರಕ್ಕೆ ತೆರಳಲು ಉದ್ಯೋಗ ವೀಸಾಗಾಗಿ ಕಾಯುತ್ತಿದ್ದ. ಧರ್ಮರಾಜ್ ನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಮಾಧ್ಯಮದಲ್ಲಿ ವರದಿಯಾದ ಬಳಿಕ ಟ್ವಿಟರ್ ನಲ್ಲಿ ಅರೆಸ್ಟ್ ಕೋಹ್ಲಿ ಟ್ರೆಂಡ್ ವೈರಲ್ ಆಗಿದೆ.