ಉಡುಪಿ: ಉದ್ಯಾವರ ಗ್ರಾಮದಲ್ಲಿ ಪರಿಸರಕ್ಕೆ ಮಾರಕವಾಗಿರುವ ಮೀನಿನ ಹುಡಿ ಸಂಗ್ರಹ ಗೋದಾಮು ರಚನೆ ಹಾಗೂ ಇನ್ನಿತರ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ನೀಡಬಾರದೆಂದು ಒತ್ತಾಯಿಸಿ ಗ್ರಾಮಸ್ಥರು ಸೋಮವಾರ ಪಾದಯಾತ್ರೆ ಮೂಲಕ ಗ್ರಾಮ ಪಂಚಾಯಿತಿಗೆ ಆಗಮಿಸಿ ಗ್ರಾಪಂ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್ ಅವರಿಗೆ ಮನವಿ ಸಲ್ಲಿಸಿದರು.
ಪಾದಯಾತ್ರೆಯಲ್ಲಿ ಪಿತ್ರೋಡಿ, ಕಲಾಯಿಬೈಲ್, ಸಂಪಿಗೆ ನಗರದ ಗ್ರಾಮಸ್ಥರು ಭಾಗವಹಿಸಿದ್ದರು. ಕೈಯಲ್ಲಿ ಪರಿಸರ ರಕ್ಷಣೆ, ಆರೋಗ್ಯ ಪಾಲನೆ ಕಾಪಾಡುವಂತೆ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಪಾದಯಾತ್ರೆ ನಡೆಸಿದರು.
ಜನವಸತಿ ಪ್ರದೇಶದಲ್ಲಿ ಕಾನೂನಿಗೆ ವಿರುದ್ಧವಾಗಿರುವ ಕೈಗಾರಿಕೆಗಳಿಗೆ ಅನುಮತಿಯನ್ನು ನೀಡದೆ ಗ್ರಾಮಸ್ಥರ ಆರೋಗ್ಯ ಕಾಪಾಡಲು ಸಹಕರಿಸಬೇಕು. ಈಗಾಗಲೇ ಕಾನೂನುಬಾಹಿರವಾಗಿ ನೀಡಿದ ಪರವಾನಿಗೆಗಳನ್ನು ಹಿಂಪಡೆಯುವಂತೆ ಗ್ರಾಮಸ್ಥರು ಆಗ್ರಹಿಸಿದರು.