ವಿಲ್ಲೇಜ್ ಲೈಫ್ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ

ಉಡುಪಿ: ತ್ರಿವರ್ಣ ಆರ್ಟ್‌ ಸೆಂಟರ್‌ ಆಶ್ರಯದಲ್ಲಿ ಮಣಿಪಾಲ ಮತ್ತು ಕುಂದಾಪುರ ತ್ರಿವರ್ಣ ಕಲಾ ಕೇಂದ್ರದ ಹಿರಿಯ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಮಣಿಪಾಲ ಗೀತಾಮಂದಿರದಲ್ಲಿ ಆಯೋಜಿಸಿದ್ದ ಮೂರು ದಿನಗಳ ‘ವಿಲ್ಲೇಜ್‌ ಲೈಫ್‌’ ಚಿತ್ರಕಲಾ ಪ್ರದರ್ಶನಕ್ಕೆ ಅಂಬಲಪಾಡಿ ದೇಗುಲದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್‌  ಶನಿವಾರ ಚಾಲನೆ ನೀಡಿದರು.
ಮಣಿಪಾಲ ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ನ ಆಡಳಿತಾಧಿಕಾರಿ ಡಾ. ಎಚ್‌.
ಶಾಂತಾರಾಮ್‌ ಮಾತನಾಡಿ, ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆ, ಆಟಗಳನ್ನು
ಗುರುತಿಸಿಕೊಳ್ಳಲು ಚಿತ್ರಕಲಾ ಪ್ರದರ್ಶನ ಸಹಕಾರಿಯಾಗಿದೆ. ಗ್ರಾಮಗಳು ನಗರಗಳಾಗಿ
ಪರಿವರ್ತನೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಭಾರತದ ಗ್ರಾಮೀಣ ವ್ಯವಸ್ಥೆಯನ್ನು ಈ
ಚಿತ್ರಕಲಾ ಪ್ರದರ್ಶನ ಮತ್ತೆ ಕಟ್ಟಿಕೊಟ್ಟಿದೆ ಎಂದರು.
ಉದ್ಯಮಿ ಮನೋಹರ ಶೆಟ್ಟಿ, ಮಕ್ಕಳ ತಜ್ಞೆ ಡಾ. ಗೌರಿ, ನಗರಸಭಾ ಸದಸ್ಯ ಮಂಜುನಾಥ
ಮಣಿಪಾಲ, ತ್ರಿವರ್ಣ ಆರ್ಟ್‌ ಸೆಂಟರ್‌ ನಿರ್ದೇಶಕ ಹರೀಶ್‌ ಸಾಗಾ ಉಪಸ್ಥಿತರಿದ್ದರು.
ಇಂದಿನಿಂದ ಮಾರ್ಚ್‌ 11ರ ವರೆಗೆ ಚಿತ್ರಕಲಾ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರಿಗೆ
ಕಲಾಕೃತಿಗಳ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.
೨೪ ಕಲಾಕೃತಿಗಳ ಪ್ರದರ್ಶನ:
ಗ್ರಾಮೀಣ ಜನಜೀವನ ಬಿಂಬಿಸುವ ಅಕ್ಕಿ ಮುಡಿ ಕಟ್ಟುವುದು, ಹೂ ಕಟ್ಟುವ ಮಹಿಳೆ,
ದನ-ಕರುಗಳೊಂದಿಗೆ ಸಾಗುವ ಮಹಿಳೆ, ಓಲೆಯಲ್ಲಿ ಬೆಂಕಿ ಕಾಯಿಸುವ ಮಹಿಳೆ, ಮೊಸರು ಕಡೆಯುವ ಗೃಹಣಿ, ಲಗೋರಿ ಹೊಡೆಯುತ್ತಿರುವ ಹುಡುಗ, ಚಿಮಣಿ ಬೆಳಕಿನಲ್ಲಿ ಓದುತ್ತಿರುವ ಬಾಲಕ, ಎತ್ತಿನ ಗಾಡಿಯಲ್ಲಿ ಪ್ರಯಾಣಿಸುತ್ತಿರುವ ಜನರು, ತೆಂಗಿನ ಗರಿ ಹೆಣೆಯುತ್ತಿರುವ ಮಹಿಳೆ, ಸೈಕಲ್‌ ಟಯರ್‌ ಓಡಿಸುತ್ತಿರುವ ಬಾಲಕ ಮೊದಲಾದ ೨೪ ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು.