ಆಗಸ್ಟ್​ 23, ಸಂಜೆ 6.04 ನಿಮಿಷಕ್ಕೆ ಚಂದ್ರನ ಮೇಲೆ ಇಳಿಯುವ ‘ವಿಕ್ರಮ್​’

ನವದೆಹಲಿ : ಇನ್ನು ಮೂರೇ ದಿನಗಳಲ್ಲಿ ಭಾರತ ಐತಿಹಾಸಿಕ ದಾಖಲೆ ನಿರ್ಮಾಣಕ್ಕೆ ಸಜ್ಜಾಗಿದೆ.ಭಾರತ ಸೇರಿದಂತೆ ವಿಶ್ವವೇ ತುದಿಗಾಲ ಮೇಲೆ ನಿಂತು ಕಾಯುತ್ತಿರುವ ಚಂದ್ರಯಾನ-3 ನೌಕೆಯ ಲ್ಯಾಂಡಿಂಗ್​​ನ ದಿನ ಮತ್ತು ಸಮಯವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಧಿಕೃತವಾಗಿ ಪ್ರಕಟಿಸಿದೆ.ಚಂದ್ರಯಾನ-3 ನೌಕೆಯನ್ನು ಚಂದಮಾಮನ ದಕ್ಷಿಣ ಧ್ರುವದ ಮೇಲೆ ಇಳಿಸುವ ದಿನಾಂಕ, ಮುಹೂರ್ತವನ್ನು ಇಸ್ರೋ ಅಧಿಕೃತವಾಗಿ ಘೋಷಿಸಿದೆ. ಐತಿಹಾಸಿಕ ಕ್ಷಣಗಳ ನೇರಪ್ರಸಾರ ಕೂಡ ಇರಲಿದೆ ಎಂದಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ನಿಗದಿಪಡಿಸಲಾದ ಜಾಗದಲ್ಲಿ ಚಂದ್ರಯಾನ-3 ನೌಕೆಯ ಲ್ಯಾಂಡರ್​ ಆಗಸ್ಟ್ 23 ಸಂಜೆ 6.04 ನಿಮಿಷಕ್ಕೆ ಸರಿಯಾಗಿ ಇಳಿಯಲಿದೆ ಎಂದು ಇಸ್ರೋ ಭಾನುವಾರ ಅಧಿಕೃತವಾಗಿ ಘೋಷಿಸಿದೆ. ಕೋಟ್ಯಂತರ ಭಾರತೀಯರ ಕನಸು ನನಸಾದಲ್ಲಿ, ಈ ವಿಕ್ರಮ ಸಾಧಿಸಿದ ವಿಶ್ವದ ನಾಲ್ಕನೇ ಮತ್ತು ದಕ್ಷಿಣ ಧ್ರುವಕ್ಕೆ ಇಳಿದ ಮೊದಲ ದೇಶ ಎಂಬ ಹಿರಿಮೆಗೆ ಭಾರತ ಪಾತ್ರವಾಗಲಿದೆ.

ಚಂದ್ರನ ಮೇಲೆ ‘ವಿಕ್ರಮ'”: ಚಂದ್ರನ ಮೇಲೆ ಇಳಿಯುವ ಲ್ಯಾಂಡರ್​ಗೆ ‘ವಿಕ್ರಮ್​’ ಎಂದು ಹೆಸರಿಸಲಾಗಿದೆ. ಅದರಲ್ಲಿರುವ ರೋವರ್​ ಚಂದ್ರನ ಮೇಲ್ಮೈ ಅಧ್ಯಯನ ನಡೆಸಲಿದೆ. ಕೆಲ ದಿನಗಳ ಹಿಂದಷ್ಟೇ ಚಂದ್ರಯಾನ-3 ಗಗನನೌಕೆ ಪ್ರೊಪಲ್ಷನ್​ ಮಾಡ್ಯೂಲ್​ನಿಂದ ಲ್ಯಾಂಡರ್​ ಮಾಡ್ಯೂಲ್​ ಬೇರ್ಪಟ್ಟಿತ್ತು. ಇದಾದ ಬಳಿಕ ಸಾಫ್ಟ್​ ಲ್ಯಾಂಡಿಂಗ್​ಗೆ ನಿರ್ಣಾಯಕವಾದ ‘ಡಿಬೂಸ್ಟಿಂಗ್​’ ನಡೆಸಿ ಚಂದ್ರನ ಸುಮಾರು 100 ಕಿಮೀ ಅಂತರದಲ್ಲಿ ಲ್ಯಾಂಡರ್​ ಅನ್ನು ತಂದು ನಿಲ್ಲಿಸಲಾಗಿದೆ.

ಚಂದ್ರಯಾನ-3 ಯೋಜನೆಯನ್ನು 250 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 2020 ರ ಜನವರಿಯಲ್ಲಿ ಪ್ರಾರಂಭಿಸಲಾಯಿತು. 2021 ರಲ್ಲಿ ಉಡಾವಣೆ ಮಾಡಲು ಯೋಜಿಸಲಾಗಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕ ಹರಡಿದ ಕಾರಣ ಮಿಷನ್​ ಅನಿರೀಕ್ಷಿತವಾಗಿ ವಿಳಂಬ ಕಂಡಿತ್ತು.ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು(ಇಸ್ರೋ) ಜುಲೈ 14 ರಂದು ಚಂದ್ರಯಾನ-3 ಗಗನನೌಕೆಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು. ನೌಕಾಯಾನ ಆರಂಭವಾಗಿ ಇಂದಿಗೆ ಒಂದು ತಿಂಗಳು ಮತ್ತು ಆರು ದಿನಗಳು ಕಳೆದಿವೆ. ಬಾಹುಬಲಿ ಎಂದೇ ಖ್ಯಾತಿಯಾದ ಜಿಎಸ್​ಎಲ್​ವಿ ಮಾರ್ಕ್ 3 ದೈತ್ಯ ವಾಹನದಲ್ಲಿನ ಉಪಗ್ರಹವನ್ನು ಆಗಸ್ಟ್ 5 ರಂದು ಚಂದ್ರನ ಕಕ್ಷೆಗೆ ಸೇರಿಸಲಾಗಿತ್ತು. ಅಂದಿನಿಂದ ಹಲವು ಕಕ್ಷೆ ಇಳಿಸುವ ಯತ್ನ ನಡೆಸಿ ಇದೀಗ ಚಂದ್ರನ ಚುಂಬಿಸಲು ದಿನಗಣನೆ ಆರಂಭವಾಗಿದೆ.

2019 ರಲ್ಲಿ ನಡೆಸಲಾಗಿದ್ದ ಚಂದ್ರಯಾನ-2 ಮಿಷನ್ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್​ ಲ್ಯಾಂಡಿಂಗ್ ಸಮಯದಲ್ಲಿ ತಾಂತ್ರಿಕ ದೋಷಕ್ಕೀಡಾಗಿ ಚಂದ್ರನ ಮೇಲೆ ಪತನವಾಗಿತ್ತು. ಅಂದಿನ ವೈಫಲ್ಯಗಳನ್ನೇ ಆಧಾರವಾಗಿಟ್ಟುಕೊಂಡು ಚಂದ್ರಯಾನ-3 ಯೋಜನೆಯನ್ನು ಇಸ್ರೋ ವಿಜ್ಞಾನಿಗಳು ರೂಪಿಸಿದ್ದಾರೆ.”ಚಂದ್ರಯಾನ-3 ಆಗಸ್ಟ್ 23, 2023 ರಂದು 06:04 ನಿಮಿಷಕ್ಕೆ ಚಂದ್ರನ ಮೇಲೆ ಲ್ಯಾಂಡರ್​ ಇಳಿಯಲಿದೆ. ಇಷ್ಟು ದಿನಗಳ ಪ್ರಯಾಣಕ್ಕೆ ಶುಭ ಕೋರಿದ ಮತ್ತು ಸಕಾರಾತ್ಮಕ ಮನೋಭಾವಕ್ಕೆ ಧನ್ಯವಾದಗಳು. ಮುಂದಿನ ಪ್ರಯಾಣವನ್ನು ಒಟ್ಟಿಗೆ ಮುಂದುವರಿಸೋಣ” ಎಂದು ಇಸ್ರೋ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಬರೆದುಕೊಂಡಿದೆ. ಜೊತೆಗೆ ಈ ಸಾಹಸವನ್ನು ಇಸ್ರೋದ ವೆಬ್‌ಸೈಟ್, ಅದರ ಯೂಟ್ಯೂಬ್​ ಚಾನಲ್, ಫೇಸ್​ಬುಕ್​ ಮತ್ತು ಡಿಡಿ ನ್ಯಾಷನಲ್ ಚಾನಲ್​ನಲ್ಲಿ 05.27 ರಿಂದ ನೇರಪ್ರಸಾರ ಲಭ್ಯವಿರಲಿದೆ ಎಂದು ತಿಳಿಸಿದೆ.