ವಿಜಯಾ ಬ್ಯಾಂಕ್ ಇನ್ನಿಲ್ಲ: ಏ.1 ರಿಂದ ಬ್ಯಾಂಕ್‌ ಆಫ್‌ ಬರೋಡ ಜೊತೆ ವಿಲೀನ

ಉಡುಪಿ : ನಮ್ಮೂರಿನ ಹೆಮ್ಮೆಯ ವಿಜಯ ಬ್ಯಾಂಕ್ ಉಳಿಸಿ ಎನ್ನುವ ಕುರಿತು  ಸಾಕಷ್ಟು ಜನಪರ ಹೋರಾಟಗಳು ನಡೆದರೂ  ಏ.೧ ರಿಂದ ದಕ್ಷಿಣ ಕನ್ನಡ ಮೂಲದ ವಿಜಯ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡ ಜತೆ ವಿಲೀನಗೊಳ್ಳಲಿದೆ. ಈ ಕುರಿತು  ಇದೀಗ ಅಧಿಕೃತವಾಗಿ ಬ್ಯಾಂಕಿನ ಗ್ರಾಹಕರಿಗೆ ಸಂದೇಶ ರವಾನೆಯಾಗಿದೆ.  ಎಪ್ರಿಲ್ 1ರಿಂದ ವಿಜಯ ಬ್ಯಾಂಕ್‌ ಹೆಸರೂ, ಹಳದಿ ಲೋಗೋ ಕೂಡ ಗ್ರಾಹಕರ ಕಣ್ಣಿಂದ ಕಣ್ಮರೆಯಾಗಲಿದೆ.  ಇನ್ನೇನಿದ್ದರೂ ಬ್ಯಾಂಕ್ ಹೆಸರು ಇತಿಹಾಸದ  ಪುಟ ಸೇರಲಿದೆ.

ಕರಾವಳಿಯ ಹೆಮ್ಮೆಯ ವಿಜಯ ಬ್ಯಾಂಕ್‌ ಅನ್ನು ಬ್ಯಾಂಕ್‌ ಆಫ್‌ ಬರೋಡ ಜತೆಗೆ ವಿಲೀನಗೊಳಿಸುವ ನಿರ್ಧಾರ ಘೋಷಣೆಯಾಗುತ್ತಿದ್ದಂತೆ ಕರಾವಳಿ ಭಾಗದಲ್ಲಿ ಅದರಲ್ಲಿಯೂ ದ.ಕ., ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ವಿರೋಧ-ಪ್ರತಿಭಟನೆಗಳು ನಡೆದರೂ, ಆದರೆ, ಅಸ್ತಿತ್ವ ಉಳಿಸುವ ಸಂಬಂಧ ವಿಜಯ ಬ್ಯಾಂಕ್‌ ನಿವೃತ್ತ ಅಧಿಕಾರಿಗಳು, ಅಭಿಮಾನಿಗಳ ಹೋರಾಟದ ನಡುವೆಯೂ ವಿಲೀನಗೊಳಿಸುವ ಪ್ರಕ್ರಿಯೆಗಳು ನಡೆದಿತ್ತು. ಕೊನೆಯ ಹಂತದಲ್ಲಿಯಾದರೂ ಲಾಭದಲ್ಲಿರುವ ವಿಜಯ ಬ್ಯಾಂಕ್‌ ಅನ್ನು ವಿಲೀನ ಪ್ರಕ್ರಿಯೆ ಯಿಂದ ಕೈಬಿಡಬಹುದು ಎನ್ನುವ ನಿರೀಕ್ಷೆ ಹೋರಾಟಗಾರರಲ್ಲಿ, ಕರಾವಳಿಗರಲ್ಲಿ ಇತ್ತು. ಆ ನಿರೀಕ್ಷೆ ಈಗ ಹುಸಿಯಾಗಿದೆ. ವಿಜಯಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಆಗಲಿದ್ದು ಈಗಾಘಲೇ ವಿಜಯಾ ಬ್ಯಾಂಕ್ ಜೊತೆ ವ್ಯವಹಾರ ನಡೆಸುವವರಿಗೆ ಏನೂ ತೊಂದರೆ ಇಲ್ಲ.

ಬ್ಯಾಂಕ್ ಕಳಿಸಿದ ಎಸ್ ಎಂ ಎಸ್ ನಲ್ಲಿ ಏನಿದೆ?:

 ‘2019 ಎ. 1ರಿಂದ ಬ್ಯಾಂಕ್‌ ಆಫ್‌ ಬರೋಡ, ವಿಜಯ ಬ್ಯಾಂಕ್‌. ದೇನಾ ಬ್ಯಾಂಕುಗಳು ಪರಸ್ಪರ ವಿಲೀನಗೊಳ್ಳಲಿವೆ. ಇನ್ನು ಮುಂದಿನ ದಿನಗಳಲ್ಲಿ ನೀವು ದೇಶದ 3ನೇ ಅತಿ ದೊಡ್ಡ ಬ್ಯಾಂಕ್‌ ನೆಟ್ವರ್ಕ್‌ ಜತೆ ವ್ಯವಹಾರ ನಡೆಸಲಿದ್ದೀರಿ. ನಿಮ್ಮ ಈಗಿರುವ ಖಾತೆ ಸಂಖ್ಯೆ, ಡೆಬಿಟ್/ ಕ್ರೆಡಿಟ್ ಕಾರ್ಡ್‌, ಮೊಬೈಲ್ ಮತ್ತು ನೆಟ್ ಬ್ಯಾಂಕಿಂಗ್‌ ಸೌಲಭ್ಯಗಳೊಂದಿಗೆ ಸೇವೆಗಳು ಯಥಾಸ್ಥಿತಿ ಮುಂದುವರಿಯಲಿವೆ. ವಿವರಗಳಿಗೆ ನಿಮ್ಮ ಈಗಿರುವ ವಿಜಯ ಬ್ಯಾಂಕ್‌ ಶಾಖೆಯನ್ನು ಸಂಪರ್ಕಿಸಬಹುದು.’