ಮಕ್ಕಳಿಗೆ ಚಿನ್ನದ ಉಂಗುರ, ನವವಧುಗಳಿಗೆ ಕೈ ತುಂಬಾ ಚಿನ್ನ, ರೇಶ್ಮೆಸೀರೆ ಕೊಡ್ತಾರಂತೆ ವಿಜಯ್, ಇದೇನು ಸಿನಿಮಾ ಸ್ಟೋರಿ ಅಲ್ಲ ತಮಿಳುನಾಡಿಗೆ ವಿಜಯ್ ಕೊಟ್ಟ ಬಂಪರ್ ಭರವಸೆ!

ತಮಿಳುನಾಡಿನಲ್ಲಿ ನಟ-ರಾಜಕಾರಣಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಈ ಬಾರಿ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಭರ್ಜರಿ ಜಯಭೇರಿ ಭಾರಿಸಿದೆ. ಈಗ ವಿಶೇಷವಾಗಿ ವಿಜಯ್ ಪ್ರಣಾಳಿಕೆಯಲ್ಲಿ ಘೋಷಿಸಿದ ಭರ್ಜರಿ “ಚಿನ್ನದ ಭರವಸೆಗಳು” ಜನರ ಗಮನ ಸೆಳೆಯುತ್ತಿದೆ.ಚಿನ್ನಕ್ಕೆ ಸಂಬಂಧಿಸಿದ ಭರವಸೆಗಳ ಸರಮಾಲೆಯನ್ನೇ ನೀಡಿದ್ದು, ಇದೀಗ ಇದರ ವೆಚ್ಚದ ಬಗ್ಗೆ ಚರ್ಚೆ ಶುರುವಾಗಿದೆ.

ನವಜಾತ ಶಿಶುಗಳಿಗೆ ಚಿನ್ನದ ಉಂಗುರ, ವಧುಗಳಿಗೆ 8 ಗ್ರಾಂ ಚಿನ್ನ ಮತ್ತು ರೇಷ್ಮೆ ಸೀರೆ ನೀಡುವಂತಹ ಯೋಜನೆಗಳು ಜನರಲ್ಲಿ ಆಕರ್ಷಣೆ ಹುಟ್ಟಿಸಿದರೂ, ಅವುಗಳ ಆರ್ಥಿಕ ಪರಿಣಾಮಗಳ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ.

ಯೋಜನೆ ಜಾರಿ ಲೆಕ್ಕಾಚಾರ!

  • ವರ್ಷಕ್ಕೆ ಸುಮಾರು 4.7 ಲಕ್ಷ ಮಕ್ಕಳಿಗೆ ಉಂಗುರ ನೀಡಲು ₹235 ಕೋಟಿ ವೆಚ್ಚವಾಗಬಹುದು
  • ಮದುವೆ ಯೋಜನೆಯಡಿಯಲ್ಲಿ 2.7 ಲಕ್ಷ ವಧುಗಳಿಗೆ ಚಿನ್ನ+ಸೀರೆ ನೀಡಲು ₹3,000 ಕೋಟಿ ಮೀರಿದ ವೆಚ್ಚ ಬರಬಹುದು,ಇದರಿಂದ ಕೇವಲ ಈ ಎರಡು ಯೋಜನೆಗಳಿಗೇ ₹3,300 ಕೋಟಿ ರಿಂದ ₹4,000 ಕೋಟಿ ವರೆಗೆ ಖರ್ಚಾಗುವ ಸಾಧ್ಯತೆ ಇದೆ.
  • ಮಹಿಳೆಯರಿಗೆ ತಿಂಗಳಿಗೆ ₹2,500 ನೆರವು → ವರ್ಷಕ್ಕೆ ಸುಮಾರು ₹30,000 ಕೋಟಿ
  • ಉಚಿತ ಆರೋಗ್ಯ ವಿಮೆ, ಗ್ಯಾಸ್ ಸಿಲಿಂಡರ್, ಬಸ್ ಪ್ರಯಾಣ ಮುಂತಾದ ಯೋಜನೆಗಳು → ಇನ್ನಷ್ಟು ಸಾವಿರಾರು ಕೋಟಿ ವೆಚ್ಚ

ಈ ಎಲ್ಲಾ ಭರವಸೆಗಳನ್ನು ಸೇರಿಸಿದರೆ, ಒಟ್ಟು ವೆಚ್ಚ ರಾಜ್ಯದ ಬಜೆಟ್ ಮೇಲೆ ದೊಡ್ಡ ಒತ್ತಡ ತರುತ್ತದೆ. ಉದಾಹರಣೆಗೆ, ತಮಿಳುನಾಡಿನ ಒಟ್ಟು ಬಜೆಟ್ (2025–26) ಸುಮಾರು ₹3.89 ಲಕ್ಷ ಕೋಟಿ. ಇದರಲ್ಲಿ ದೊಡ್ಡ ಭಾಗ ಕಲ್ಯಾಣ ಯೋಜನೆಗಳಿಗೆ ಹೋಗುವ ಸಾಧ್ಯತೆ ಇದೆ.

ಈ ಯೋಜನೆಗಳಿಗೆ ಹಣವನ್ನು ಹೇಗೆ ಒದಗಿಸಲಾಗುತ್ತದೆ, ತೆರಿಗೆ ಹೆಚ್ಚಿಸಲಾಗುತ್ತದೆಯೇ? ಅಥವಾ ಹೊಸ ಸಾಲ ತೆಗೆದುಕೊಳ್ಳಲಾಗುತ್ತದೆಯೇ? ತಜ್ಞರ ಅಭಿಪ್ರಾಯದಲ್ಲಿ, ಕಲ್ಯಾಣ ಯೋಜನೆಗಳು ಜನಪರವಾಗಿದ್ದರೂ, ಅವುಗಳ ಜಾರಿಗೆ ಆರ್ಥಿಕ ಸಾಮರ್ಥ್ಯ ಅತ್ಯಗತ್ಯ. ವಿಶೇಷವಾಗಿ ಚಿನ್ನದ ಬೆಲೆ ನಿರಂತರ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ, ಈ ರೀತಿಯ ಯೋಜನೆಗಳು ದೀರ್ಘಾವಧಿಯಲ್ಲಿ ಇನ್ನಷ್ಟು ಭಾರವಾಗುವ ಸಾಧ್ಯತೆ ಇದೆ.

ಒಟ್ಟಿನಲ್ಲಿ, ವಿಜಯ್ ಅವರ ಭರವಸೆಗಳು ರಾಜಕೀಯವಾಗಿ ಪರಿಣಾಮಕಾರಿ ಆಗಿದ್ದರೂ, ಆಡಳಿತದಲ್ಲಿ ಅವುಗಳನ್ನು ಸಮತೋಲನದಿಂದ ಜಾರಿಗೊಳಿಸುವುದು ದೊಡ್ಡ ಸವಾಲಾಗಿ ಕಾಣುತ್ತಿದೆ.