ಸೌಂದರ್ಯ ಎಲ್ಲರ ಕಣ್ಣನ್ನು ಗೆಲ್ಲುತ್ತೆ. ಪ್ರತಿಭೆ ಎಲ್ಲರ ಹೃದಯವನ್ನು ಗೆಲ್ಲುತ್ತೆ” ಎಂಬ ಮಾತಿದೆ. ಬಡವನೇ ಇರಲಿ, ಶ್ರೀಮಂತನೇ ಆಗಲಿ ಯಾರಲ್ಲಿ ಕಲಾಭಿವ್ಯಕ್ತಿತ್ವ ಇರುತ್ತೋ ಅಂತಹ ಪ್ರತಿಭೆಯನ್ನು ಸಮಾಜ ಗುರುತಿಸಿಯೇ ಗುರುತಿಸುತ್ತೆ. ಆ ಸಾಲಿಗೆ ವಿದ್ಯಾನಂದ (ವಿಘ್ನೇಶ್ ಕೆ.ಎಸ್) ಎಂಬ ಚಿತ್ರಕಲಾ ಪ್ರತಿಭೆ ಹೊರತಲ್ಲ
ಮನೆಯೊಳಗೆ ಕಡುಬಡತನದ ಬೇಗೆ ಇದ್ದರೂ ತನ್ನ ಕೈಚಳಕದಿಂದ ಮೂಡಿ ಬರುತ್ತಿರುವ ಈತನ ಚಿತ್ರಕಲೆಗೆ ಯಾವುದೇ ಬೇಗೆ ಇಲ್ಲ.
ಸಾಮಾಜಿಕ ಜಾಲತಾಣದಲ್ಲಿ ತಾನು ಬಿಡಿಸಿದ ಕಲಾಚಿತ್ರಗಳನ್ನು ಹರಿಯಬಿಟ್ಟು. ಅಪಾರ ಕಲಾಭಿಮಾನಿಗಳ ಮೆಚ್ಚುಗೆಯನ್ನು ಸಂಪಾದಿಸಿದ್ದಾನೆ. ವಿಘ್ನೇಶ್.
ಯಾವುದೇ ಕಲಾವಿದನ ಕಲಾಭಿವ್ಯಕ್ತಿತ್ವ ಹೊರಹೊಮ್ಮಿ ಬರಲು ಸತತವಾದ ಅಭ್ಯಾಸ, ಆ ಕ್ಷೇತ್ರದಲಿ ಮುನ್ನಡೆಯಬೇಕೆಂಬ ಆಶಾಭಾವ, ಕುತೂಹಲ, ಇಚ್ಛಾಶಕ್ತಿ ಬಹಳ ಮುಖ್ಯ. ಈತನ ಮಾತುಗಳನ್ನು ಕೇಳಿದಾಗ ಆತನೊಳಗಿರುವ ಉತ್ಸಾಹ, ಛಲಕ್ಕೆ ಯಾರಾದರೂ ತಲೆದೂಗಲೇಬೇಕು.
ಪ್ರಸ್ತುತ ಬಂಟ್ವಾಳ ತಾಲೂಕಿನ ವಾಮದಪದವು ಗ್ರಾಮದ ಬಸ್ತಿಕೋಡಿಯ ಅಜ್ಜಿ ಮನೆಯಲ್ಲಿರುವ, ಈತ ದಿ.ಶ್ರೀನಿವಾಸ ಹಾಗೂ ಕುಸುಮ ದಂಪತಿಯ ಪುತ್ರ. ತಾಯಿ ಕೂಲಿಮಾಡಿ ಒಂದು ಹಂತಕ್ಕೆ ವಿದ್ಯಾಭ್ಯಾಸ ನೀಡಿ ಮಗನನ್ನು ಸಲಹಿದ್ದಾರೆ. ಚಿತ್ರಕಲೆಯಲಿ ಅದಮ್ಯವಾದ ಆಸೆ ಆಕಾಂಕ್ಷೆ ಇದ್ದರೂ ಅದಕ್ಕೆ ಪ್ರೋತ್ಸಾಹದ ನೀರೆರೆಯುವುದು ಬಹಳ ಮುಖ್ಯವು ಆಗಿತ್ತು.
ಸಾಧಿಸೋ ಹುಮ್ಮಸ್ಸು:
ಬಾಲ್ಯದಲ್ಲೇ ವಿದ್ಯಾನಂದ ಕಲಿಕೆಯಲ್ಲಿ ಸಹಿತ ಪಠ್ಯೇತರ ಚಟುವಟಿಕೆಯಲ್ಲಿಯೂ ನಾಮುಂದು ತಾಮುಂದೆನ್ನುವಂತೆ ಭಾಗವಹಿಸುತ್ತಿದ್ದ. ಜೊತೆಗೆ ಅಲ್ಲೋ ಇಲ್ಲೋ ಗೆದ್ದು ಬಹುಮಾನಿತನಾಗಿ ಮನೆಗೆ ಬಂದಾಗ ತಾಯಿಗೆ ಎಲ್ಲಿಲ್ಲದ ಆನಂದ. ಜೊತೆಗೆ ಮುಂದೊಂದು ದಿನ “ನೀನೂ ಕೂಡಾ ಪ್ರತಿಭಾವಂತನಾಗಿ ಪೇಪರ್, ಟೀವಿಯಲ್ಲಿ ಸುದ್ದಿಯಾಗಿ ಬರಬೇಕು ಎಂಬ ಹಂಬಲವನ್ನು ವ್ಯಕ್ತಪಡಿಸುತ್ತಿದ್ದರು. ಹೀಗೆಂದಾಗ ಹುಡುಗನಿಗೂ ಕೂಡಾ ಮನದಲಿ ಏನಾದರೂ ಸಾಧಿಸಬೇಕು ಎಂಬ ಉತ್ಸಾಹ ಮೂಡಿಬರುತ್ತಿತ್ತು. ಆದರೇನು ಮಾಡುವುದು ಮನೆಯ ಪರಿಸ್ಥಿತಿಯ ನಡುವೆ ಈ ಬಗೆಯ ಸಾಧನೆ ಮಾಡಲು ಸಾಧ್ಯವೇ ಎಂದೆನಿದ್ದು ಇದೆ.
ಪ್ರಾಥಮಿಕ ಶಾಲೆ ಮುಗಿಸಿ ಪ್ರೌಢಶಾಲೆಗೆ ಬಂದಾಗ ಬರಡಾಗಿದ್ದ ಅಭಿರುಚಿಗೆ ಜೀವ ಚೈತನ್ಯ ಸಿಕ್ಕಂತಾಯಿತು. ಹವ್ಯಾಸವಾಗಿದ್ದ ಚಿತ್ರಕಲೆಯಲಿ ಮುಂದುವರಿದು ಸಾಗಬೇಕೆಂಬ ಚಿತ್ತಕ್ಕೆ ಕೊಂಡಿಯಾಗಿ ವಾಮದಪದವು ಪ್ರೌಢಶಾಲೆಯ ವಾತವರಣ ಬುತ್ತಿಯಾಯಿತು.
ಅಲ್ಲಿನ ಚಿತ್ರಕಲಾ ಶಿಕ್ಷಕ ಶ್ರೀ ಮುರಳಿಕೃಷ್ಣ ರಾವ್ ರವರು ಇನ್ನಷ್ಟು ಪಳಗಲು, ಬೆಳೆಯಲು, ಚಿತ್ರಕಲೆಯು ಸುಂದರವಾಗಿ ಮೂಡಿಬರಲು ಪ್ರೇರಕಶಕ್ತಿಯಾದರು. ಶಾಲೆಯ ಬೋಧಕರ ಪ್ರೋತ್ಸಾಹವು ಮತ್ತಷ್ಟು ಹುರುಪು ತಂದುಕೊಟ್ಟಿತು. ಬದುಕಿನಲ್ಲಿ ಭರವಸೆ ಮೂಡಿತು. ಹೇಗೋ ಪದವಿ ವ್ಯಾಸಂಗವು ಅಲ್ಲಿ ಇಲ್ಲಿ ಕೆಲಸ ಮಾಡಿ ಮುಗಿಯಿತು.
ಕೊರೋನಾ ಕಾಲದಲ್ಲಿ ಅರಳಿತು ಬಣ್ಣದ ಕನಸು:
ಅದೇ ಹೊತ್ತು ಕೊರೋನ ಕರಿಛಾಯೆಯ ಆವರಿಸಿ ಮನೆಯಲ್ಲೇ ಬಂಧಿಯಾಗಬೇಕಾಯಿತು. ಅಷ್ಟೊತ್ತಿಗೆ ಮತ್ತೆ ಬಾಡಿದ್ದ ಕೈಗಳ ಸೆಳೆತ ಚಿತ್ರಕಲೆಯನು ಬಿಡಿಸಲು ಹಾತೊರೆಯಿತು. ಮನಸಿನಲ್ಲಿ ಮೂಡಿದ ಭಾವಗಳನ್ನು, ತನ್ನ ಪ್ರೀತಿ ಪಾತ್ರರ ಚಿತ್ರಗಳನ್ನು ಬಿಡಿಸಿ ಕಳುಹಿಸಿದಾಗ ಅಪಾರವಾದ ಮೆಚ್ಚುಗೆಯ ಮಾತುಗಳು ಹೊರಬಂದಾಗ
“ವಿವಿಧ ರೂಪದಲ್ಲಿ ಪೆನ್ಸಿಲ್ ಸ್ಕೆಚ್, ಲೀಪ್ ಆರ್ಟ್, ಗ್ಲೂ ಗಿಲ್ಟರ್, ವಾಟರ್ ಕಲರ್ ಪೈಂಟಿಂಗ್, ವಾಲ್ ಆರ್ಟ್ ಹೀಗೆ ನವೀನಶೈಲಿಯ ಚಿತ್ರಕಲೆಯನ್ನು ಪ್ರಯೋಗಶೀಲತೆಗೆ ಒಳಪಡಿಸಿದೆನು. ಅದನ್ನು ನನ್ನ ಪ್ರೀತಿ ಪಾತ್ರರಿಗೆ ಹಂಚುತ್ತ ಮುನ್ನಡೆಯುತ್ತಿರುವೆ” ಎನ್ನುತ್ತಾನೆ ವಿಘ್ನೇಶ್. ಈ ಹುಡುಗನ ಮಾತು ಕೇಳುತ್ತಿದ್ದರೆ ಮನದ ಭಾವದ ಚಿತ್ರವೇ ಮೂಡಿಬಂದಂತಾಗುತ್ತದೆ.
ಮನೆಯ ಮನದ ಚಿತ್ರ ಹೇಗೆ ಇದ್ದರೂ ಭಾವದಲಿ ಮೂಡುಬರುವ ಈತನ ಕಲಾಚಿತ್ರವು ಇದೀಗ ಚಿತ್ರ ಸಹೃದಯರ ಕಣ್ಣನ್ನು ಆಕರ್ಷಿಸುತ್ತಿದೆ.
ಒಂದಿನಿತು ಅಹಂಕಾರ ಇಲ್ಲದೆ ಎಲ್ಲರೊಂದಿಗೆ ಲವಲವಿಕೆಯಲಿ ಪ್ರೀತಿ ವಿಶ್ವಾಸದ ಸೇತುವೆಯಾಗಿ ತನ್ನ ಬಂಧು ಮಿತ್ರರ ನಡುವೆ ಹಸನ್ಮುಖಿಯಾಗಿ ಬೆರೆಯುವ ಈ ಯುವ ಪ್ರತಿಭೆಗೆ ಮೆಚ್ಚುಗೆಯ ನಿಮ್ಮ ಪ್ರೋತ್ಸಾಹ ಇರಲಿ ಎಂಬುದು ನಮ್ಮ ಆಶಯವಾಗಿದೆ. ವಿಘ್ನೇಶ್ ಅವರ ಸಂಪರ್ಕ :9148526219
ಬರಹ ♦ ಮುಕ್ತ ಮನಸು(ಸಂತೋಷ್ ನೆಲ್ಲಿಕಾರು)