ಬೆಂಗಳೂರು : ಸದಸ್ಯರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.
ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಈ ತಿಂಗಳ 30ರಂದು ಉಪಚುನಾವಣೆ ನಡೆಯಲಿದೆ. ವಿಧಾನ ಪರಿಷತ್ತಿನ ಸದಸ್ಯರಾಗಿದ್ದ ಮಾಜಿ ಸಚಿವರುಗಳಾದ ಬಾಬುರಾವ್ ಚಿಂಚನಸೂರ್, ಆರ್.
ಶಂಕರ್ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಚುನಾವಣಾ ಆಯೋಗ ಇಂದು ಉಪಚುನಾವಣೆ ವೇಳಾಪಟ್ಟಿ ಘೋಷಿಸಿತು.
ವಿಧಾನಸಭೆಯ ಶಾಸಕರು ಚುನಾವಣೆಯ ಮತದಾರರಾಗಿದ್ದಾರೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ 135, ಬಿಜೆಪಿ 66 ಮತ್ತು ಜೆಡಿಎಸ್ 19 ಶಾಸಕರನ್ನು ಹೊಂದಿವೆ. ಜೂನ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಜೂನ್ 20 ರಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನ. ಜೂನ್ 21ರಂದು ನಾಮಪತ್ರಗಳ ಪರಿಶೀಲನೆ ನಡೆಯುತ್ತದೆ. ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸ್ ಪಡೆಯಲು ಜೂನ್ 23 ಕಡೆಯ ದಿನವಾಗಿದೆ. ಜೂನ್ 30 ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಉಪಚುನಾವಣೆಗೆ ಮತದಾನ ನಡೆಯುತ್ತದೆ. ಅದೇ ದಿನ ಸಂಜೆ 5 ಗಂಟೆಗೆ ಮತಗಳ ಎಣಿಕೆ ನಡೆಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಆಯೋಗ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಜೂ.30 ರಂದು ಉಪಚುನಾವಣೆ
ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾಗಿದ್ದ ಮಾಜಿ ಸಚಿವರಾದ ಬಾಬುರಾವ್ ಚಿಂಚನಸೂರ್, ಆರ್.ಶಂಕರ್ ಮತ್ತು ಲಕ್ಷ್ಮಣ ಸವದಿ ಬಿಜೆಪಿ ಟಿಕೆಟ್ ದೊರೆಯದಿದ್ದಕ್ಕೆ ಬಿಜೆಪಿ ತೊರೆದಿದ್ದರು. ಪರಿಷತ್ತಿಗೆ ಚುನಾಯಿತರಾದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.
ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಪಕ್ಷದಿಂದ ಲಕ್ಷ್ಮಣ ಸವದಿ ಮತ್ತು ಬಾಬುರಾವ್ ಚಿಂಚನಸೂರ್ ಸ್ಪರ್ಧೆ ಮಾಡಿದ್ದರು. ಇವರಲ್ಲಿ ಸವದಿ ಮಾತ್ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದರೆ ಬಾಬುರಾವ್ ಚಿಂಚನಸೂರ್ ಚುನಾವಣೆಯಲ್ಲಿ ಸೋತಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್ ತಪ್ಪಿದ್ದ ಮಾಜಿ ಸಚಿವ ಆರ್. ಶಂಕರ್ಗೆ ಕಾಂಗ್ರೆಸ್ನಲ್ಲಿಯೂ ಟಿಕೆಟ್ ಸಿಗಲಿಲ್ಲ. ಅವರು ಶರದ್ ಪವಾರ್ ನೇತೃತ್ವದ ಎನ್ಸಿಪಿ ಪಕ್ಷದಿಂದ ರಾಣೆಬೆನ್ನೂರಿನಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಆದರೆ, ಜಯಗಳಿಸಲು ಸಾಧ್ಯವಾಗದೇ ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಸ್ಪೀಕರ್ ಬಿ.ಬಿ. ಕೋಳಿವಾಡ ಅವರ ಪುತ್ರ ಗೆದ್ದಿದ್ದಾರೆ.
ಉಪಚುನಾವಣೆಯಲ್ಲಿ ಗೆದ್ದವರ ಅಧಿಕಾರವಧಿ ಸಾಮಾನ್ಯ ಚುನಾವಣೆಯಂತೆ 6 ವರ್ಷ ಅವಧಿಯದ್ದಲ್ಲ. ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದು ಇವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆಯುವ ಉಪಚುನಾವಣೆಯಲ್ಲಿ ಗೆದ್ದ ಪರಿಷತ್ ಸದಸ್ಯರ ಅವಧಿ 2024ರ ಜೂನ್ 17ನೇ ತಾರೀಖಿನ ತನಕ ಇರುತ್ತದೆ. ಆರ್.ಶಂಕರ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆಯುವ ಉಪಚುನಾವಣೆಯಲ್ಲಿ ಗೆದ್ದ ವಿಧಾನಪರಿಷತ್ ಸದಸ್ಯರ ಅಧಿಕಾರಾವಧಿ 2026ರ ಜೂನ್ ಅಂತ್ಯದವರೆಗೆ ಇರುತ್ತದೆ. ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ರಾಜೀನಾಮೆಯಿಂದ ಖಾಲಿಯಾದ ಸ್ಥಾನಕ್ಕೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಗೆದ್ದ ಮೇಲ್ಮನೆ ಸದಸ್ಯರ ಅಧಿಕಾರವಧಿ 2028ರ ಜೂನ್ 14ನೇ ತಾರೀಖಿನವರೆಗೆ ಇರುತ್ತದೆ.