ನೀಟ್ ಟಾಪರ್ ನಿತ್ಯ ಗಂಗಾರತಿ ಬೆಳಗುವ ವಿಭು ಉಪಾಧ್ಯಾಯನ ಸಾಧನೆ ಸರ್ವರಿಗೂ ಮಾದರಿ

ಹೊಸದಿಲ್ಲಿ: ಮಳೆ-ಗಾಳಿ-ಛಳಿ ಎಂದು ಲೆಕ್ಕಿಸದೆ ನಿತ್ಯವೂ ಗಂಗಾನದಿಗೆ “ಗಂಗಾರತಿ” ಬೆಳಗುವ ಉತ್ತರ ಪ್ರದೇಶದ ಬದೌನ್‌ನ 17 ವರ್ಷದ ಬಾಲಕ ವಿಭು ಉಪಾಧ್ಯಾಯ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಪರೀಕ್ಷೆಯಲ್ಲಿ 720 ಕ್ಕೆ 662 ಅಂಕಗಳೊಂದಿಗೆ ಮೊದಲಪ್ರಯತ್ನದಲ್ಲೆ ತೇರ್ಗಡೆಯಾಗಿ ದೇಶದಲ್ಲಿ ಮನೆಮಾತಾಗಿದ್ದಾನೆ.

ಉತ್ತರಪ್ರದೇಶದ ಬದೌನ್ ಜಿಲ್ಲೆಯವನಾದ ವಿಧು ಮಾಧ್ಯಮಗಳೊಂದಿಗೆ ಸಂವಾದದಲ್ಲಿ ಮಾತನಾಡುತ್ತಾ, ನಾನು ಚಿಕ್ಕಂದಿನಿಂದಲೂ ವೈದ್ಯನಾಗಲು ಬಯಸಿದ್ದೆ ಮತ್ತು ಇದಕ್ಕಾಗಿ ನಾನು 9 ನೇ ತರಗತಿಯಿಂದಲೇ ತಯಾರಿ ಆರಂಭಿಸಿದ್ದೆ ಎಂದಿದ್ದಾನೆ.

ನೀಟ್ ಪರೀಕ್ಷೆಯಲ್ಲಿ 720 ರಲ್ಲಿ 662 ಅಂಕಗಳನ್ನು ಪಡೆದಿರುವ ವಿಭು ಟಾಪರ್ ಗಳಲ್ಲಿ ಒಬ್ಬ. ವಿಭು ಒಬ್ಬ ಉತ್ಕಟ ಧಾರ್ಮಿಕ ಭಕ್ತ, ಈತ ನಿತ್ಯ ಗಂಗಾ ಆರತಿಯನ್ನು ಮಾಡಲು ಇಷ್ಟಪಡುತ್ತಾನೆ. ಈ ಬಗ್ಗೆ ಮಾಹಿತಿ ನೀಡಿದ ವಿಭು ತಾನು ಸಮಯ ಸಿಕ್ಕಾಗಲೆಲ್ಲಾ ಆರತಿ ಮಾಡಲು ಹೋಗುತ್ತೇನೆ ಮತ್ತು ಮುಂದೆಯೂ ಅದನ್ನು ಮಾಡುತ್ತೇನೆ ಎಂದು ಹೇಳಿದ್ದಾನೆ.

2019 ರಲ್ಲಿ ಗಂಗಾ ಆರತಿ ಕಾರ್ಯಕ್ರಮದ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಕ್ಕಾಗಿ ತಮ್ಮ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಡಿಕೆ ಸಿಂಗ್ ಅವರಿಗೆ ಧನ್ಯವಾದ ಅರ್ಪಿಸಿರುವ ವಿಭು ಅಂತಹ ಉಪಕ್ರಮಗಳು ಅವರಂತಹ ಯುವಕರಿಗೆ ಸನಾತನ ಧರ್ಮದೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ನೀಡುತ್ತವೆ ಎಂದು ಅಭಿಪ್ರಾಯ ಪಡುತ್ತಾನೆ.

ಸಾಂಪ್ರದಾಯಿಕ ಉಡುಗೆ ತೊಟ್ಟು ಗಾಂಗಾರತಿ ಬೆಳಗುವ ಈತ “ಜನರ ಸೇವೆ ಮಾಡಲು ಗಂಗಾ ತಾಯಿ ನನ್ನನ್ನು ಆಯ್ಕೆ ಮಾಡಿದ್ದಾರೆ,” ಎಂದು ಹೇಳುತ್ತಾನೆ.

ಈತನ ಸಾಧನೆಯನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೊಗಳಿದ್ದು, ಸಂಸ್ಕಾರ ಮತ್ತು ಶಿಸ್ತಿನ ಜೀವನ ಹಾಗೂ ಕಠಿಣ ಪರಿಶ್ರಮದಿಂದ ಇದು ಸಾಧ್ಯವಾಗಿದೆ ಎಂದಿದ್ದಾರೆ. ಬಾಲಕನ ಸಾಧನೆಗೆ ಆತನನ್ನು ಅಭಿನಂದಿಸಿ ಗಂಗಾ ಮಾತೆಯ ಆಶೀರ್ವಾದ ಸದಾ ಆತನ ಮೇಲಿರುವಂತೆ ಶುಭ ಹಾರೈಸಿದ್ದಾರೆ.