ಏಳು ತಿಂಗಳ ಗರ್ಭಿಣಿಯಾಗಿದ್ದ ಪ್ರೊಬೆಷನರಿ ಪಿಎಸ್ ಐ ಕೋವಿಡ್ ಗೆ ಬಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಪಿ ಕಚೇರಿಯಲ್ಲಿ ಪ್ರೊಬೆಷನರಿ ಪಿಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವತಿ ಶಾಮಿಲಿ (24) ಕೋವಿಡ್ ಗೆ ಬಲಿಯಾಗಿದ್ದಾರೆ.

ಈ ಬಗ್ಗೆ ಕರ್ನಾಟಕದ ಡಿಜಿಪಿ ಪ್ರವೀಣ್ ಸೂದ್ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.

24 ವರ್ಷದ ಪ್ರೊಬೆಷನರಿ ಪಿಎಸ್ ಐ ಶಾಮಿಲಿ ಮೂಲತಃ ಕೋಲಾರದವರು. ಜನವರಿ 11 ರಂದು ಮಂಗಳೂರು ಎಸ್ ಪಿ ಕಚೇರಿಯಲ್ಲಿ ಸೇವೆ ಆರಂಭಿಸಿದ್ದರು. 7 ತಿಂಗಳ ಗರ್ಭಿಣಿಯಾಗಿದ್ದ ಅವರು, ರಜೆ ತೆಗೆದುಕೊಂಡು ತಮ್ಮ ಊರು ಕೋಲಾರಕ್ಕೆ ಮರಳಿದ್ದರು.

ಆ ನಂತರ ಅವರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ಮೇ 2 ರಂದು ಕೋವಿಡ್ ಚಿಕಿತ್ಸೆಗಾಗಿ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮುಂಜಾನೆ 4.30 ರ ಹೊತ್ತಿಗೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಗರ್ಭಿಣಿಯಾಗಿದ್ದ ಕಾರಣ ಅವರು ಕೋವಿಡ್ ಲಸಿಕೆ ಪಡೆದುಕೊಂಡಿರಲಿಲ್ಲ ಎನ್ನಲಾಗಿದೆ.