ಪಣಜಿ: ಭಾರತೀಯ ಚಿತ್ರರಂಗದ ಖ್ಯಾತ ಹಿರಿಯ ನಟ ನಾನಾ ಪಾಟೇಕರ್ (75) ಅವರು ಗುರುವಾರ ಬೆಳಗ್ಗೆ ಗೋವಾದ ತಮ್ಮ ನಿವಾಸದಲ್ಲಿ ತೀವ್ರ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಬೆಳಗ್ಗೆ 5.20ರ ಸುಮಾರಿಗೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಸುಮಾರು 45 ನಿಮಿಷಗಳ ಕಾಲ ಸಿಪಿಆರ್ ನಡೆಸಿದರೂ ಯಾವುದೇ ಸ್ಪಂದನೆ ದೊರೆಯಲಿಲ್ಲ ಎಂದು ಮಣಿಪಾಲ್ ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಘಟನೆಗೆ ಸಂಬಂಧಿಸಿದಂತೆ ಮೆಡಿಕೋ-ಲೀಗಲ್ ಪ್ರಕರಣ (MLC) ದಾಖಲಿಸಲಾಗಿದ್ದು, ಸಾವಿನ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಖಡಕ್ ಸಂಭಾಷಣೆ ಹಾಗೂ ವಿಶಿಷ್ಟ ಅಭಿನಯದ ಮೂಲಕ ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ನಾನಾ ಪಾಟೇಕರ್, ‘ಪರಿಂಧಾ’, ‘ಕ್ರಾಂತಿವೀರ್’, ‘ಅಗ್ನಿಸಾಕ್ಷಿ’, ‘ತಿರಂಗಾ’, ‘ವೆಲ್‌ಕಮ್’, ‘ನಟಸಾಮ್ರಾಟ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದ್ದರು. ಅಭಿನಯಕ್ಕಾಗಿ ಅವರು ಮೂರು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದರು.
ನಾನಾ ಪಾಟೇಕರ್ ಕನ್ನಡದ ‘ಯಕ್ಷ’ ಚಿತ್ರದಲ್ಲೂ ಅಭಿನಯಿಸಿದ್ದರು. 2010ರಲ್ಲಿ ಬಿಡುಗಡೆಯಾದ ಈ ಆ್ಯಕ್ಷನ್ ಥ್ರಿಲ್ಲರ್‌ನಲ್ಲಿ ಅವರು ಯೋಗರಾಜ್ ಪುಲಕೇಶ್ ಎಂಬ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದರು.
ನಟ ಮಕರಂದ್ ಅನಾಸ್ಪುರೆ ಅವರೊಂದಿಗೆ ‘ನಾಮ್ ಫೌಂಡೇಶನ್’ ಸ್ಥಾಪಿಸಿದ್ದ ನಾನಾ ಪಾಟೇಕರ್, ಮಹಾರಾಷ್ಟ್ರದ ಬರಪೀಡಿತ ರೈತರು ಮತ್ತು ಅವರ ಕುಟುಂಬಗಳಿಗೆ ನೆರವಾಗುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದರು. ‘ಪ್ರಹಾರ್: ದಿ ಫೈನಲ್ ಅಟ್ಯಾಕ್’ ಚಿತ್ರದ ಮೂಲಕ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದರು.
ನಾನಾ ಪಾಟೇಕರ್ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.















