ಉಪಗ್ರಹದ ಮೂಲಕ ಮೀನುಗಾರರ ಹುಡುಕಾಟ :ಸಚಿವ ವೆಂಕಟರಾವ್ ನಾಡಗೌಡ

ಉಡುಪಿ: ಕಳೆದ 25 ದಿನಗಳಿಂದ ನಾಪತ್ತೆಯಾಗಿರುವ ತ್ರಿಭುಜ ಭೋಟ್ ಮಾಲೀಕ ಚಂದ್ರಶೇಖರ್ ಕೋಟ್ಯಾನ್ ಹಾಗೂ ತಾಂಡೇಲ ದಾಮೋದರ ಸಾಲಿಯಾನ್ ಅವರ ಬಡಾನಿಡಿಯೂರು ಗ್ರಾಮದ ಪಾವಂಜಿಗುಡ್ಡೆ ಮನೆಗಳಿಗೆ ಬುಧವಾರ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಬಳಿಕ ಮಾಧ್ಯಮ‌ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಬೋಟ್ ಹಾಗೂ ಏಳು ಮಂದಿ ಮೀನುಗಾರರಿಗೆ ಸಂಬಂಧಿಸಿ ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಪೊಲೀಸರು ಮಾತ್ರವಲ್ಲದೆ ಕೋಸ್ಟ್ ಗಾರ್ಡ್, ನೌಕಪಡೆ ಹಾಗೂ ಹೆಲಿಕಾಫ್ಟರ್ ಮೂಲಕ ಹುಡುಕಾಟ ಮಾಡುತ್ತಿದ್ದೇವೆ. ನಾವು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಇಸ್ರೊಗೆ ಮಾಹಿತಿ ನೀಡಿ ಉಪಗ್ರಹದ ಮೂಲಕ ಹುಡುಕಾಟ ನಡೆಸುವ ಕೆಲಸ ಮಾಡುತ್ತಿದ್ದೇವೆ ಎಂದು ಭರವಸೆ ನೀಡಿದರು. 
ಇನ್ನು ಬೇರೆ ಯಾವುದಾದರೂ ಮೂಲದ ಮೂಲಕ ಶೋಧ ಕಾರ್ಯಾಚರಣೆ ಮಾಡಲು ಅವಕಾಶ ಇರುವ ಬಗ್ಗೆ ಹೇಳಿದರೆ, ಸರಕಾರ ಮುಕ್ತ ಮನಸ್ಸಿನಿಂದ ಆ ಕೆಲಸ ಮಾಡಲಿದೆ. ನಾಪತ್ತೆಯಾಗಿರುವ ಬೋಟಿನ ಬಣ್ಣ ಬದಲಾಯಿಸಿ ಮೀನುಗಾರರನ್ನು ಅಪಹರಿಸಿರುವ ಬಗ್ಗೆ ಕೆಲ ಮೀನುಗಾರರು ಸಂಶಯ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿನ ಬೋಟ್ ಗಳನ್ನು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ತನಿಖೆ ನಡೆಸಲು ಆದೇಶ ನೀಡಲಾಗುವುದು ಎಂದು ತಿಳಿಸಿದರು.
 
ತಾತ್ಕಾಲಿಕ ಒಂದು ಲಕ್ಷ ಪರಿಹಾರ:
ನಾಪತ್ತೆಯಾಗಿರುವ ಮೀನುಗಾರರನ್ನು ಪತ್ತೆ ಹಚ್ಚುವವರೆಗೆ ಮುಖ್ಯಮಂತ್ರಿ ಪರಿಹಾರನಿಧಿಯಿಂದ ಪ್ರತಿ ಕುಟುಂಬಕ್ಕೆ ತಲಾ ಒಂದು ಲಕ್ಷ ತಾತ್ಕಾಲಿಕ ಪರಿಹಾರ ಬಿಡುಗಡೆ ಮಾಡಲು ಆದೇಶಿಸಲಾಗಿದೆ.
ಈ ಕುರಿತು ಮುಖ್ಯಮಂತ್ರಿ ಗಳ ಜೊತೆ ಚರ್ಚೆ ಮಾಡಿದ್ದೇವೆ. ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಇಂದೇ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದು, ಅದೇ ರೀತಿ ಉಡುಪಿ ಜಿಲ್ಲಾಧಿಕಾರಿಗಳಿಗೂ ತಿಳಿಸಲಾಗಿದೆ. ನಾಳೆ ಆ ಪರಿಹಾರ ಮೊತ್ತ ವಿತರಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.
 
ಯಾವುದೇ ಕಾರ್ಯಾಚರಣೆಗೂ ಸಿದ್ಧ:
ಮೀನುಗಾರರನ್ನು ಹುಡುಕುವ ವಿಚಾರದಲ್ಲಿ ಯಾರು ಯಾವುದೇ ಸಲಹೆ ಕೊಟ್ಟರು ಆ ದಿಕ್ಕಿನಲ್ಲಿ ಹುಡುಕಾಡುವ ಪ್ರಯತ್ನ ಮಾಡುತ್ತೇವೆ. ಮೀನುಗಾರರು ಯಾವುದೇ ಅವಘಡದಲ್ಲಿ ಸಿಲುಕಿಕೊಂಡಿದ್ದರೂ ಅವರನ್ನು ಸುರಕ್ಷಿತವಾಗಿ ಕರೆತರುವ ಕೆಲಸವನ್ನು ರಾಜ್ಯ ಸರಕಾರ ಮಾಡಲಿದೆ ಎಂದು ಆಶ್ವಾಸನೆ ನೀಡಿದರು.
ಮೀನುಗಾರರ ಹುಡುಕಾಟಕ್ಕೆ ಕೇಂದ್ರ ಸರಕಾರವೂ ಸರ್ವ ರೀತಿಯಲ್ಲೂ ಸಹಕಾರ ನೀಡುತ್ತಿದೆ. ನೌಕಪಡೆ ಮೂಲಕ ಶೋಧ ಕಾರ್ಯಾಚರಣೆ ನಡೆಸಲು ಅನುಕೂಲ ಮಾಡಿಕೊಟ್ಟಿದೆ. ಇನ್ಮುಂದೆ ಸಮುದ್ರ ಜೊತೆಗೆ ಕಡಲ ತೀರದ ಆಸುಪಾಸುಗಳಲ್ಲಿಯೂ ಶೋಧ ಕಾರ್ಯಾಚರಣೆ ನಡೆಸಲಾಗುವುದು. ಈಗಾಗಲೇ ಪೊಲೀಸರು ಮಹಾರಾಷ್ಟ್ರ ಹಾಗೂ ಗೋವಾ ಪೊಲೀಸರ ಸಹಕಾರದೊಂದಿಗೆ ತನಿಖೆ ನಡೆಸುತ್ತಿದ್ದಾರೆ. 
 
ಮೀನಿನ ಬಾಕ್ಸ್ ಪತ್ತೆ: ತನಿಖೆ ಚುರುಕು
ಸಿಂಧೂದುರ್ಗಾದಲ್ಲಿ ಮಲ್ಪೆ ಬಂದರಿನ ಬೋಟ್ ಗೆ ಸಂಬಂಧಿಸಿದೆ ಎನ್ನಲಾದ ಎರಡು ಮೀನು ಹಾಕುವ ಬಾಕ್ಸ್ ಅನ್ನು ಪತ್ತೆಯಾಗಿದೆ. ಅದನ್ನು ಶೋಧ ಕಾರ್ಯ ತಂಡದ ಜೊತೆ ಇರುವ ಮೀನುಗಾರರು ಗುರುತಿಸಿದ್ದಾರೆ. ಈ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ ಎಂದು ಸಚಿವ ನಾಡಗೌಡ ತಿಳಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನಿಸ್ಸ್, ಎಸ್ಪಿ ಲಕ್ಷ್ಮಣ ನಿಂಬರಗಿ, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಪಾರ್ಶ್ವನಾಥ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಹಾಜರಿದ್ದರು.