ವಿಶ್ವ ಅಂಗದಾನ ದಿನಾಚರಣೆ: ಅಂಗದಾನದ ಮಹತ್ವ ತಿಳಿಸಲು ರೋಟರಿ ಕ್ಲಬ್ ವತಿಯಿಂದ ವಾಹನ ಜಾಥಾ

ಮಣಿಪಾಲ: ವಿಶ್ವ ಅಂಗದಾನ ದಿನಾಚರಣೆ ಅಂಗವಾಗಿ ಆಗಸ್ಟ್ 13 ಶನಿವಾರದಂದು ಸಂಜೆ 4 ರಿಂದ 6 ಗಂಟೆಯವರೆಗೆ ವಾಹನ ಜಾಥಾ ನಡೆಯಲಿದೆ. ರೋಟರಿ ವಲಯ 4ರ ಹತ್ತು ಕ್ಲಬ್ ಗಳಾದ ಪೆರ್ಡೂರು, ಪರ್ಕಳ, ಐಸಿರಿ ಪರ್ಕಳ, ಮಣಿಪಾಲ ಟೌನ್, ಮಣಿಪಾಲ, ಮಣಿಪಾಲ ಹಿಲ್ಸ್, ಉಡುಪಿ, ಉಡುಪಿ ರೋಯಲ್, ಉದ್ಯಾವರ ಮತ್ತು ಕಟಪಾಡಿಯ ಸದಸ್ಯರು ತಮ್ಮ ತಮ್ಮ ಪ್ರದೇಶದಿಂದ ಕಾರಿನಲ್ಲಿ ಜೋಡುಕಟ್ಟೆಯಿಂದ ಉಡುಪಿಗೆ ಬರಲಿರುವರು.

ಉಡುಪಿಯಿಂದ ಮಣಿಪಾಲ ಟೈಗರ್ ಸರ್ಕಲ್ ವರೆಗಿನ ಕಾರು ಮತ್ತು ಬೈಕ್ ಜಾಥಾಕ್ಕೆ ಅಪರ ಜಿಲ್ಲಾಧಿಕಾರಿ ಶ್ರೀಮತಿ ವೀಣಾ ಇವರು, ಎಸ್ಪಿ ವಿಷ್ಣುವರ್ಧನ್, ರೋಟರಿ ಗವರ್ನರ್ ರೋ.ಡಾ.ಜಯಗೌರಿ, ಮಾಹೆಯ ಪ್ರೊ.ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ, ರೋಟರಿ ಸಹಾಯಕ ಗವರ್ನರ್ ರೋ.ರಾಮಚಂದ್ರ ಉಪಾಧ್ಯಾಯ ಮತ್ತು ರೋಟರಿ ಜಿಲ್ಲಾ ಯೋಜನೆ – ಚರ್ಮ ಮತ್ತು ಅಂಗದಾನದ ಸಭಾಪತಿ ರೋ.ಡಾ.ಶ್ರೀಧರ ಮತ್ತಿತರ ಗಣ್ಯರೊಡನೆ ಚಾಲನೆ ನೀಡಲಿರುವರು.

ವಲಯದ ವಿವಿದ ಕ್ಲಬ್ ಗಳ ಅಧ್ಯಕ್ಷರುಗಳು ಮತ್ತು ಸದಸ್ಯರು, ಮಣಿಪಾಲ ಅಟೋಕ್ಲಬ್ ಮತ್ತು ಉಡುಪಿ ಜಾವಾ ಯೆಜ್ದಿ ಮೋಟಾರ್ ಸೈಕಲ್ ಕ್ಲಬ್ ನ ಸದಸ್ಯರು, ಉಡುಪಿ ಮತ್ತು ಮಣಿಪಾಲ ಪೋಲೀಸ್ ಠಾಣೆಯ ಮುಖ್ಯಸ್ಥರು ಮತ್ತು ಸಿಬ್ಬಂದಿಗಳು ಈ ಜಾಥಾದಲ್ಲಿ ಭಾಗವಹಿಸಲಿರುವರು.

ಅಂಗದಾನದ ಅಗತ್ಯತೆ ಮತ್ತು ಮಹತ್ವವನ್ನು ತಿಳಿಯಪಡಿಸುವ ಸಲುವಾಗಿ ಜನಜಾಗೃತಿಗಾಗಿ ಈ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಪ್ರಕಟಣೆ ತಿಳಿಸಿದೆ.