ವಾರದೊಳಗಡೆ ನೇತ್ರಾವತಿ ಸೇತುವೆಗೆ ಸಿಸಿ ಟಿವಿ, ತಂತಿ ಬೇಲಿಗೆ ಟೆಂಡರ್: ಶಾಸಕ ಕಾಮತ್

ಮಂಗಳೂರು: ನೇತ್ರಾವತಿ ಸೇತುವೆಯ ಇಕ್ಕೆಲಗಳಲ್ಲಿ ತಂತಿ ಬೇಲಿ ಹಾಗೂ ಸಿಸಿ ಟಿವಿ ಅಳವಡಿಕೆ ಕಾಮಗಾರಿಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಈ ವಾರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಈ ಹಿಂದೆ ಹೇಳಿದಂತೆ ನೇತ್ರಾವತಿ ಸೇತುವೆಯ ಮೇಲೆ ಸಿಸಿ ಟಿವಿ ಅಳವಡಿಸಲು 5 ಲಕ್ಷ ಹಾಗೂ ಸೇತುವೆಗೆ ರಕ್ಷಣಾ ಬೇಲಿ ನಿರ್ಮಾಣ ಕಾಮಗಾರಿಗೆ 58 ಲಕ್ಷ ರೂಪಾಯಿಯನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.
ಸಿಸಿಟಿವಿ ಹಾಗೂ ತಂತಿ ಬೇಲಿ ನಿರ್ಮಾಣಕ್ಕೆ ನಗರಾಭಿವೃದ್ಧಿ ಕೋಶದಿಂದ ಅನುಮೋದನೆ ದೊರಕಲಿದೆ. ಒಂದು ವಾರದೊಳಗಡೆ ಟೆಂಡರ್ ಪ್ರಕ್ರಿಯೆಗಳು ಪ್ರಾರಂಭವಾಗಲಿದೆ.
ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಈ ಕಾಮಗಾರಿಗಳು ಪ್ರಾರಂಭವಾಗಲಿದೆ. ನಗರ ಪ್ರದೇಶಕ್ಕೆ ತಾಗಿಕೊಂಡಿರುವ ನೇತ್ರಾವತಿ ನದಿಯ ಮೇಲೆ ನಡೆಯುವ ಅನಾಹುತಗಳನ್ನು ತಪ್ಪಿಸುವ ಸದುದ್ಧೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.
ಸದ್ಯ ಲಾಕ್ ಡೌನ್ ಹಿನ್ನೆಲೆಯಲ್ಲಿ ಈ ಹಿಂದೆ ರೂಪುಗೊಂಡಿದ್ದ ಈ ಯೋಜನೆ ವಿಳಂಬವಾಗಿತ್ತು. ಹಾಗಾಗಿ ಟೆಂಡರ್ ಕರೆದ ತಕ್ಷಣವೇ ಈ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.