ವಂಡ್ಸೆ ಗ್ರಾಮಕ್ಕೆ ಬೇಕಾಗಿದೆ 108 ಅಂಬ್ಯುಲೆನ್ಸ್ ಮತ್ತು ಸಮುದಾಯ ಆರೋಗ್ಯ ಕೇಂದ್ರ

ಕುಂದಾಪುರ: ವಂಡ್ಸೆ ಹೋಬಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದರೂ 108 ಅಂಬ್ಯುಲೆನ್ಸ್ ಮತ್ತು ಸಮುದಾಯ ಆರೋಗ್ಯ ಕೇಂದ್ರ ಇಲ್ಲದಿರುವುದು ದುರದೃಷ್ಕಕರ. ವಂಡ್ಸೆ ಹೋಬಳಿ ಗ್ರಾಮ ಆಗಿರುವುದರಿಂದ ಇಲ್ಲಿಗೆ ಒಂದು ಸಮುದಾಯ ಆರೋಗ್ಯ ಕೇಂದ್ರ ಮತ್ತು 108 ಅಂಬ್ಯುಲೆನ್ಸ್ ಸೌಲಭ್ಯ ಅಗತ್ಯವಾಗಿದೆ. ಇಲ್ಲಿನ ಸರಕಾರಿ ಕಛೇರಿ, ಬ್ಯಾಂಕುಗಳು, ಸೊಸೈಟಿಯಂತಹ ನಾನಾ ಕೆಲಸಗಳಿಗೆ ಬೇರೆ ಗ್ರಾಮಗಳಿಂದ ನೂರಕ್ಕೂ ಹೆಚ್ಚು ಜನರು ವ್ಯವಹಾರಕ್ಕಾಗಿ ಪ್ರತಿ ನಿತ್ಯ ಬರುತ್ತಾರೆ.

ಹೋಬಳಿಗೊಂದು ಸಮುದಾಯ ಆರೋಗ್ಯ ಕೇಂದ್ರ ಇದ್ದರೆ ಸಾರ್ವಜನಿಕರಿಗೆ ಅನುಕೂಲವಾಗುವುದು.ಇಲ್ಲಿ ಯಾರದ್ದಾದರೂ ಆರೋಗ್ಯ ಹದೆಗೆಟ್ಟರೆ ದೂರದ ಕುಂದಾಪುರ ತಾಲೂಕು ಆಸ್ಪತ್ರೆಗೇ ಹೋಗಬೇಕಾಗುತ್ತದೆ. ರಾತ್ರಿ ಸಮಯದಲ್ಲಿ ಆರೋಗ್ಯ ಎರುಪೇರಾದರೆ ಜನರು ಸಂಕಷ್ಟ ಎದುರಿಸಬೇಕಾಗುತ್ತದೆ. ಈ ಗ್ರಾಮವು ಹೋಬಳಿ ಗ್ರಾಮ ಆದರೂ ಕೂಡಾ 108 ಅಂಬ್ಯುಲೆನ್ಸ್ ಮತ್ತು ಸಮುದಾಯ ಆರೋಗ್ಯ ಕೇಂದ್ರ ಇಲ್ಲದಿರುವುದರಿಂದ ಸಾರ್ವಜನಿಕರು ಸಂಕಷ್ಟದಲ್ಲಿದ್ದಾರೆ.

ರಸ್ತೆ ಅಪಘಾತ ಹಾಗೂ ಇನ್ನಿತರ ತುರ್ತು ಸಂಧರ್ಭದಲ್ಲಿ ಅಂಬ್ಯೂಲೆನ್ಸ್ ಆಲೂರು ಅಥವಾ ಕೊಲ್ಲೂರಿನಿಂದ ಬರಬೇಕಾಗುತ್ತದೆ. ತುರ್ತು ಸಂದರ್ಭದಲ್ಲಿ ವಾಹನ ಚಾಲಕರಿಗೆ ಕರೆ ಮಾಡಿದರೆ ಅವರಿಗೆ ವಿಳಾಸ ಹುಡುಕುವುದೇ ಸಮಸ್ಯೆಯಾಗಿ ಹೊತ್ತು ಕಳೆಯುತ್ತದೆ. ಅಪಘಾತ ಸಂದರ್ಭದಲ್ಲಂತೂ ಇದರಿಂದ ವ್ಯಕ್ತಿಯ ಪ್ರಾಣಕ್ಕೆ ಸಂಚಕಾರ ಬರುವ ಸಾಧ್ಯತೆಗಳಿವೆ. ಗ್ರಾಮದಲ್ಲಿ ಆಂಬ್ಯುಲನ್ಸ್ ಸೌಲಭ್ಯವಿದ್ದಲ್ಲಿ ವ್ಯಕ್ತಿಗಳ ಪ್ರಾಣ ಉಳಿಸಲು ಸಹಕಾರಿಯಾಗಲಿದೆ.

ಜನರು ಚಿತ್ತೂರು, ಇಡೂರು, ಕುಂಜ್ಞಾಡಿ ,ಕೆರಾಡಿ, ಹೊಸೂರು,ಜಡ್ಕಲ್, ಮೂದುರು ಮತ್ತು ಬೇರೆ ಬೇರೆ ಗ್ರಾಮದಿಂದ ಔಷಧಗೋಸ್ಕರ ಈ ಗ್ರಾಮಕ್ಕೆ ಬರುತ್ತಾರೆ. ಹೆಚ್ಚಿನ ಚಿಕಿತ್ಸೆಗಾಗಿ ಇವರು ಕುಂದಾಪುರಕ್ಕೆ ತೆರಳಬೇಕಾಗುತ್ತದೆ. ವಂಡ್ಸೆ ಗ್ರಾಮದಲ್ಲಿಯೇ ಸಮುದಾಯ ಆರೋಗ್ಯ ಕೇಂದ್ರವಿದ್ದರೆ ಒಂದೇ ಸೂರಿನಡಿ ಎಲ್ಲಾ ಸೌಲಭ್ಯವನ್ನು ಸಾರ್ವಜನಿಕರಿಗೆ ದೊರಕಿಸಿಕೊಡಬಹುದಾಗಿದೆ. ಆದ್ದರಿಂದ ಸಂಬಂಧಪಟ್ಟವರು ಆದಷ್ಟು ಬೇಗನೆ ಇತ್ತ ಗಮನಹರಿಸುವುದು ಒಳ್ಳೆಯದು.

ಚಿತ್ರ/ವರದಿ: ರಕ್ಷಿತ ಕುಮಾರ ವಂಡ್ಸೆ