ಬ್ರಹ್ಮಾವರ: ಯುವ ವಿಚಾರ ವೇದಿಕೆ ವತಿಯಿಂದ ವನಮಹೋತ್ಸವ

ಬ್ರಹ್ಮಾವರ: ಯುವ ವಿಚಾರ ವೇದಿಕೆ (ರಿ) ಕೊಳಲಗಿರಿ, ಗ್ರಾಮ ಪಂಚಾಯತ್ ಉಪ್ಪೂರು, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಸುವರ್ಣ ಎಂಟರ್ಪ್ರೈಸಸ್ ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ ಜುಲೈ 09 ಆದಿತ್ಯವಾರದಂದು ವೇದಿಕೆಯ ವಠಾರದಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು.

ಔಷಧೀಯ ಗಿಡ, ಹಣ್ಣುಗಳ ಗಿಡ ಹಾಗೂ ಇನ್ನಿತರ ಸುಮಾರು 100 ಗಿಡಗಳನ್ನು ವೇದಿಕೆಯ ವಠಾರದಲ್ಲಿ ಹಾಗೂ ಸದಸ್ಯರ ಮನೆಗಳಲ್ಲಿ ನೆಡಲಾಯಿತು. ಕೇವಲ ಗಿಡಗಳನ್ನು ನೆಡುವುದು ಮಾತ್ರವಲ್ಲದೆ ಅವುಗಳ ರಕ್ಷಣೆ ಹಾಗೂ ಪೋಷಣೆ ಕೂಡ ಪ್ರತಿಯೊಬ್ಬರ ಕರ್ತವ್ಯ ಹಾಗೂ ಜವಾಬ್ಧಾರಿ. ಗಿಡ ಮರಗಳಿಂದ ಭೂಮಿ, ಜೀವಜಲ ಹಾಗೂ ಪರಿಸರ ಸಂರಕ್ಷಣೆ ಆಗುವುದರಿಂದ ಗಿಡಮರಗಳನ್ನು ನೆಟ್ಟು ಬೆಳೆಸುವ ಅಗತ್ಯತೆ ಹಾಗೂ ಅನಿವಾರ್ಯತೆ ಪ್ರಸ್ತುತ ಇದೆ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕೋಟ್ಯಾನ್, ಸುವರ್ಣ ಎಂಟರ್ಪ್ರೈಸಸ್ ಮಾಲಕ ಹಾಗೂ ಜಯಂಟ್ಸ್ ಗ್ರೂಪ್ ನ ಮಾಜಿ ರಾಜ್ಯಾಧ್ಯಕ್ಷ ಮಧುಸೂಧನ್ ಹೇರೂರು, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ದ ಮಾಜಿ ಅಧ್ಯಕ್ಷ ಸುಂದರ ಪೂಜಾರಿ ಮುಡುಕುಕ್ಕುಡೆ, ಪುಷ್ಪಲತಾ ನರ್ಸರಿಯ ಕೇಶವ ಹಾಗೂ ವೇದಿಕೆಯ ಅಧ್ಯಕ್ಷ ದಿನೇಶ್ ಶೆಟ್ಟಿ ಉಪಸ್ಥಿತರಿದ್ದು ಗಿಡ ನೆಟ್ಟು ಶುಭ ಹಾರೈಸಿದರು.

ಸುವರ್ಣ ಎಂಟರ್ಪ್ರೈಸಸ್ ಬ್ರಹ್ಮಾವರ ಹಾಗೂ ಗ್ರಾಮ ಪಂಚಾಯತ್ ಉಪ್ಪೂರು ಇವರು ನೀಡಿದ ಗಿಡಗಳನ್ನು ನೆಟ್ಟು ರಕ್ಷಣೆ ಹಾಗೂ ಪೋಷಣೆ ಮಾಡುವ ಸಂಕಲ್ಪದಲ್ಲಿ ಸ್ಥಳೀಯರು ಹಾಗೂ ವೇದಿಕೆಯ ಸದಸ್ಯರು ಭಾಗವಹಿಸಿದ್ದರು.

ಸುಬ್ರಮಣ್ಯ ಆಚಾರ್ಯ ಕಾರ್ಯಕ್ರಮವನ್ನು ಸಂಯೋಜಿಸಿದರು.