ಮಂಗಳೂರು: ಶಿಕ್ಷಕರು ತಮ್ಮ ತಪ್ಪುಗಳನ್ನು ಗುರುತಿಸಲು ಇ-ಲರ್ನ್ ಸ್ಟುಡಿಯೋ ತಂತ್ರಜ್ಞಾನ ಪರಿಣಾಮಕಾರಿಯಾಗಲಿದೆ. ಈ ಶಿಕ್ಷಣ ಸಂಸ್ಥೆ ಹೊಸತನ ಮತ್ತು ಪ್ರಯೋಗಶೀಲತೆಗೆ ಸದಾ ಒತ್ತು ನೀಡುತ್ತಾ ಬಂದಿದೆ. ಎಕ್ಸ್ ಪರ್ಟ್ ಇ-ಲರ್ನ್ ಸ್ಟುಡಿಯೋ’ ಶಿಕ್ಷಣ ಕ್ಷೇತ್ರದಲ್ಲಿ ಮಾದರಿಯಾಗಿದ್ದು, ಭವಿಷ್ಯದಲ್ಲಿ ಮಹತ್ತರ ಸಾಧನೆಗೆ ಸ್ಟುಡಿಯೋ ನಾಂದಿ ಹಾಡಲಿದೆ ಎಂದು ರಾಜೀವ್ ಗಾಂಧಿ ವಿವಿಯ ಆರೋಗ್ಯ ವಿಜ್ಞಾನದ ಸಿಂಡಿಕೇಟ್ ಸದಸ್ಯ, ಡೆಂಟಲ್ ಕೌನ್ಸಿಲ್ ಆಫ್ ಇಂಡಿಯದ ಸದಸ್ಯ ಡಾ. ಶಿವಶರಣ್ ಶೆಟ್ಟಿ ಹೇಳಿದರು.
ಅವರು ವಳಚ್ಚಿಲ್ ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜಿನಲ್ಲಿ ಎಕ್ಸ್ ಪರ್ಟ್ ಇ-ಲರ್ನ್ ಸ್ಟುಡಿಯೋ’ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಕ್ಸ್ ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ಅವರು ಮಾತನಾಡಿ, ಒಂದು ಸಂಸ್ಥೆಯ ಏಳಿಗೆಗೆ ದುಡಿಯುವವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಬೇಕು. ಎಲ್ಲರೂ ಒಟ್ಟಾಗಿ ದುಡಿಯುವುದರಿಂದ ಅಂತಿಮವಾಗಿ ವಿದ್ಯಾರ್ಥಿಗಳಿಗೆ ಫಲಕಾರಿಯಾಗುತ್ತದೆ. ಪ್ರಸ್ತುತ ಪದವಿಪೂರ್ವ ಮಟ್ಟದ ಶಿಕ್ಷಣ ವಿಷಮ ಸ್ಥಿತಿಯಲ್ಲಿದೆ. ಆದ್ದರಿಂದ ಶಿಕ್ಷಣ ವೃತ್ತಿಯಲ್ಲಿ ಸದಾ ಕ್ರಿಯಾಶೀಲತೆ ಮತ್ತು ಪ್ರಯೋಗಶೀಲತೆ ಅನಿವಾರ್ಯವಾಗಿದೆ ಎಂದರು.
ಈ ಸ್ಟುಡಿಯೋ ಸಂಸ್ಥೆಯ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್. ನಾಯಕ್ ಅವರ ಕನಸಿನ ಕೂಸು. ಅದಕ್ಕೆ ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್. ನಾಯಕ್ ಅವರು ಸಾಕಾರ ನೀಡಿದ್ದಾರೆ ಎಂದರು.
ಸಂಸ್ಥೆಯ ಟ್ರಸ್ಟಿ ಉಸ್ತಾದ್ ರಫೀಕ್ ಖಾನ್, ಉಪ ಪ್ರಾಂಶುಪಾಲ ರಾಘವೇಂದ್ರ ಶೆಣೈ ಉಪಸ್ಥಿತರಿದ್ದರು.
ಪ್ರೋಗ್ರಾಂ ಆ್ಯಂಡ್ ಡೆವಲಪ್ಮೆಂಟ್ ಮ್ಯಾನೇಜರ್ ಹೇಮಂತ್ ಪೆರೋಡಿ ಸ್ಟುಡಿಯೋ ಕುರಿತು ಮಾಹಿತಿ ನೀಡಿದರು.
ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಅನಿತಾ ಪಿ. ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ವಂದಿಸಿದರು.