ಲಸಿಕಾ ವಿತರಣೆಯ ದಿಕ್ಕು ತಪ್ಪಿಸುತ್ತಿರುವ ಜನಪ್ರತಿನಿಧಿಗಳು, ತಮಗೆ ಬೇಕಾದವರಿಗೆ ಲಸಿಕೆ ವಿತರಣೆ: ಕ್ಸೇವಿಯರ್ ಡಿಮೆಲ್ಲೋ ಆರೋಪ

ಉಡುಪಿ: ಅಚ್ಚುಕಟ್ಟಾಗಿ ನಡೆಯುತ್ತಿದ್ದ ಕೊರೋನಾ ಲಸಿಕಾ ಕಾರ್ಯಕ್ರಮ ರಾಜಕಾರಣಿಗಳ ಮಧ್ಯ ಪ್ರವೇಶದಿಂದಾಗಿ ಹಳಿತಪ್ಪುತ್ತಿದ್ದು, ರಾಜಕಾರಣಿಗಳು ತಮಗೆ ಬೇಕಾದವರಿಗೆ ಲಸಿಕೆ ಸಿಗುವಂತೆ ಮಾಡುತ್ತಿದ್ದಾರೆ. ಮುಂಬೈ, ಬೆಂಗಳೂರಿನಂತಹ ದೂರದ ಊರುಗಳಿಂದ ಜಿಲ್ಲೆಗೆ ಬರುತ್ತಿರುವ ತಮ್ಮ ಸಂಬಂಧಿಕರಿಗೆ, ಆಪ್ತರಿಗೆ ಲಸಿಕೆ ಕೊಡುವಂತೆ ಶಿಫಾರಸ್ಸು ಮಾಡುತ್ತಿದ್ದಾರೆ. ಇದರಿಂದಾಗಿ ಸಾಮಾನ್ಯ ಜನರಿಗೆ ಸರಿಯಾದ ಸಮಯಕ್ಕೆ ಲಸಿಕೆ ಸಿಗುತ್ತಿಲ್ಲ,  ಎಂದು ಸಾಮಾಜಿಕ ಕಾರ್ಯಕರ್ತ, ತಾ.ಪಂ. ಸದಸ್ಯ, ಮಾಜಿ ಗ್ರಾ.ಪಂ. ಅಧ್ಯಕ್ಷರಾದ ಕ್ಸೇವಿಯರ್ ಡಿಮೆಲ್ಲೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾ.ಪಂ ವ್ಯಾಪ್ತಿಯಲ್ಲಿ ಪಿಡಿಒಗಳ ಮೂಲಕ ಸ್ಥಳೀಯ ರಾಜಕಾರಣಿಗಳು, ಪಂಚಾಯತ್ ಅಧ್ಯಕ್ಷರುಗಳು, ಸದಸ್ಯರು, ತಮ್ಮ ಸಂಬಂಧಿಕರು, ಸ್ನೇಹಿತರಿಗೆ, ಆಪ್ತವಲಯಕ್ಕೆ ಲಸಿಕೆ ಕೊಡಿಸುವಂತೆ  ಅಧಿಕಾರಿಗಳ ‌ಮೇಲೆ ಒತ್ತಡ ಹೇರುವ ಮೂಲಕ ಲಸಿಕೆಗಾಗಿ ತಿಂಗಳು ಗಟ್ಟಲೆ ಕಾದು ಕುಳಿತ ಮಂದಿಗೆ ಇದೀಗ ನಿರಾಶೆಯಾಗಿದೆ. ಅಷ್ಟೇ ಅಲ್ಲದೇ ಕಟ್ಟಡ ಕಾರ್ಮಿಕ, ಎಲೆಕ್ಟ್ರೀಷನ್,ಬ್ಯುಟಿಶಿಯನ್ ಹಾಗೂ ಇನ್ನಿತರ ‌ಬಡವರ್ಗದ ಮಂದಿಗೆ ಲಸಿಕೆ ಪಡೆಯುವ ಅವಕಾಶ ಎಂದು ತಿಳಿಸಿ ಅಧಿಕಾರಿಗಳು ತಮಗೆ ಮನಬಂದಂತೆ ಲಸಿಕೆಯನ್ನು ವಿತರಿಸುತ್ತಿರುವುದು ಖೇದಕರ ಎಂದವರು ಆರೋಪಿಸಿದ್ದಾರೆ.

ರಾಜಕೀಯ ಒತ್ತಡ ಹಾಗೂ ಅಧಿಕಾರ ದುರುಪಯೋಗ:

ಕೊರೋನಾ ಲಸಿಕೆಯನ್ನು ಎಲ್ಲ ಮಂದಿಗೆ ವಿತರಣೆ ಮಾಡುವುದಾಗಿ ಸರ್ಕಾರ ತಿಳಿಸಿದ್ದು ಅದರಂತೆ ನಗರದಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಅಲ್ಲಲ್ಲಿ
ಇಂತಿಷ್ಟು ಕೆಲವ ವರ್ಗದ ಮಂದಿಗೆ ನೀಡುವುದಾಗಿ ಕ್ಯಾಂಪ್ ಗಳನ್ನು ತೆರೆಯಲಾಗಿದೆ‌. ಈ ವೇಳೆ ಇಲ್ಲಿ ತಿಳಿಸಿದ ಮಂದಿಗೆ ನೀಡದೇ ರಾಜಕೀಯ ಒತ್ತಡ ಹಾಗೂ ಅಧಿಕಾರ ದುರುಪಯೋಗ ಮಾಡುವ ಮೂಲಕ ಖುಷಿ ಬಂದಂತೆ ಲಸಿಕೆಯನ್ನು ವಿತರಣೆ ಮಾಡಲಾಗುತ್ತಿದೆ.

ಎರಡು ಮೂರು ತಿಂಗಳಿನಿಂದ ಒಂದನೇ ಡೋಸ್ ಪಡೆದವರು ಎರಡನೇ ಡೋಸ್ ಸಿಗದೇ ವಂಚಿತರಾಗುತ್ತಿದ್ದಾರೆ. ಅಷ್ಟೇ ಅಲ್ಲದೇ ಇನ್ನು ಒಂದನೇ ಡೋಸ್ ಸಿಗದವರಿಗೆ ಈವರೆಗೆ ಅವಕಾಶ ಕಲ್ಪಸಿಲ್ಲ ಇದರಿಂದಾಗಿ ಬಾರಿ ಗೊಂದಲ ಉಂಟಾಗಿದ್ದು ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಸಮಾಜಿಕ ನ್ಯಾಯ ಒದಗಿಸಿ ಎಲ್ಲರಿಗೂ ಕ್ರಮ ಬದ್ದವಾಗಿ  ಲಸಿಕೆ ವಿತರಣೆ ಮಾಡಬೇಕು. ಆಶಾ ಕಾರ್ಯಕರ್ತೆಯರು ಈ ಹಿಂದೆ ಕೊರೋನಾ ಟೆಸ್ಟ್ ಅನ್ನು ಕ್ರಮಬದ್ಧವಾಗಿ ನಡೆಸುತ್ತಿದ್ದರು. ಲಸಿಕೆ ಪ್ರಕ್ರಿಯೆಯನ್ನು ಕೂಡ ಅವರ ಮೂಲಕ ಕ್ರಮಬದ್ಧವಾಗಿ ನಡೆಸಬೇಕು  ಎಂದು ಅವರು ಒತ್ತಾಯಿಸಿದ್ದಾರೆ.