ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಠದ ಅರ್ಚಕರಿಗೆ ಹಲ್ಲೆ ಪ್ರಕರಣ ಇಡೀ ಹಿಂದೂ ಸಮಾಜಕ್ಕೆ ನೋವು ತಂದಿದೆ. ಈ ಘಟನೆಯಲ್ಲಿ ಸ್ಥಾಪಿತ ಹಿತಾಸಕ್ತಿಗಳ ಕೈವಾಡ ಇದ್ದು, ಘಟನೆಯನ್ನು ಜಿಲ್ಲಾಧಿಕಾರಿ ಅವರು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಅರ್ಚಕ ಶ್ರೀ ಕುಮಾರ್ ಬನ್ನಿಂತಾಯ ಅವರ ಹಲ್ಲೆಗೆ ಸಂಬಂಧಿಸಿದಂತೆ ಅಲ್ಲಿ ಕೆಲವು ರಾಜಕೀಯ ನಡೆಯುತ್ತಿದೆ. ಇಂತಹ ಕೃತ್ಯ ದೇವಸ್ಥಾನದಲ್ಲಿ ನಡೆಯಬಾರದು. ದೇವಸ್ಥಾನದ ಕಚೇರಿಯಲ್ಲಿ ಹೊಡೆಯಲು ಅಧಿಕಾರ ನೀಡಿದ್ದು ಯಾರು? ಅಲ್ಲಿನ ಅಧಿಕಾರಿ ಸಮ್ಮನೆ ಇದ್ದದ್ದು ಯಾಕೆ? ಎನ್ನುವ ಪ್ರಶ್ನೆಗಳು ಸಹಜವಾಗಿ ಮೂಡುತ್ತದೆ. ಹಲ್ಲೆ ಮಾಡಿದ್ದು ಪೂರ್ವ ನಿಯೋಜಿತ, ಮಠದ ಮಾನ ಹರಣ ಮಾಡುತ್ತಿರುವರ ಷಡ್ಯಂತರ. ಹೀಗಾಗಿ ಇದರಲ್ಲಿ ರಾಜಕೀಯ ಕೈವಾಡ ಇದೆ. ದೇವಸ್ಥಾನಕ್ಕೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ವ್ಯವಸ್ಥಾಪಕರನ್ನು ತನಿಖೆಗೆ ಒಳಪಡಿಸಬೇಕು ಎಂದು ಅವರು ತಿಳಿಸಿದರು.
ಮಠದಲ್ಲಿ ಸರ್ಪಸಂಸ್ಕಾರ ಮಾಡುವಂತಹ ವ್ಯವಸ್ಥೆ ಇದೆ. ಇದನ್ನು ಯಾರು ಕೂಡ ವಿರೋಧಿಸಬಾರದು. ಅದು ಮಠದ ಧಾರ್ಮಿಕ ಸ್ವಾತಂತ್ರ್ಯ ಹಕ್ಕು. ಮಠ ಎನ್ನುವಂತದ್ದು ಸ್ವಾಯತ್ತತೆ ಸಂಸ್ಥೆ, ಅದು ಭಕ್ತರ ನಂಬಿಕೆಗೆ ಬಿಟ್ಟ ವಿಚಾರ ಎಂದ ಅವರು, ಘಟನೆಯನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ. ದೇವಾಸ್ಥಾನದ ಪಾವಿತ್ರ್ಯತೆಗೆ ಹಾಗೂ ನಂಬಿಕೆಗೆ ಚ್ಯುತಿ ತರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಗೋಷ್ಠಿಯಲ್ಲಿ ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್, ಪ್ರಾಂತ ಗೋ ರಕ್ಷಖ್ ಪ್ರಮುಖ್ ಜಗದೀಶ್ ಶೇಣವ, ಭುಜಂಗ ಕುಲಾಲ್, ಶಿವನಂದ ಮೆಂಡನ್ ಉಪಸ್ಥಿತರಿದ್ದರು.
ReplyForward
|












