ಗೆಳೆಯ ಮಧುಕರ್ ಶೆಟ್ಟಿಯವರ ಸ್ಮಾರಕ ನಿರ್ಮಿಸಲು ಸರಕಾರದ ಚಿಂತನೆ : ಸಚಿವ ಖಾದರ್

ಕುಂದಾಪುರ: ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿ ಮಧುಕರ್ ಶೆಟ್ಟಿಯವರ ಸ್ಮಾರಕ ನಿರ್ಮಿಸಲು ಸಂತೋಷ್ ಹೆಗ್ಡೆಯವರು ಆಗ್ರಹಿಸಿದ್ದಾರೆ. ಸಂತೋಷ್ ಹೆಗ್ಡೆಯವರ ಮಾತಿಗೆ ನನ್ನ ಸಂಪೂರ್ಣ ಬೆಂಬಲಿದೆ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಹೇಳಿದರು.

ಭಾನುವಾರ ಯಡಾಡಿಗೆ ಭೇಟಿ ನೀಡಿ ಐಪಿಎಸ್ ಮಧುಕರ್ ಶೆಟ್ಟಿ ಪಾರ್ಥೀವ ಶರೀರ ದರ್ಶನ ಮಾಡಿದ ಬಳಿಕ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಗೆಳೆಯನನ್ನು ಕಳೆದುಕೊಂಡ ದುಃಖ:

ಐದನೇ ತರಗತಿಯಿಂದ ಜೊತೆಯಾಗಿ ಓದಿದ್ದೆವು. ನನ್ನ ಮತ್ತು ಅವರಲ್ಲಿ ಬಹಳ ಆತ್ಮೀಯತೆ ಇತ್ತು. ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲೂ ಜೊತೆಯಾಗಿ ಸ್ಪರ್ಧಿಸುತ್ತಿದ್ದೆವು ಎಂದು ಯು.ಟಿ ಖಾದರ್ ಮಧುಕರ್ ಶೆಟ್ಟಿಯವರೊಂದಿಗಿನ ಶಾಲಾ ಹಾಗೂ ಕಾಲೇಜು ದಿನಗಳನ್ನು ನೆನೆದು ಭಾವುಕರಾದರು. ಉಳಿದಂತೆ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಸೇರಿದಂತೆ ಇತರರು ಯಡಾಡಿಗೆ ಭೇಟಿ ನೀಡಿದರು.

ಪೊಲೀಸರ ಬೇಡಿಕೆಗಳಿಗೆ ಬೆಂಬಲ

ಮಧುಕರ್ ಶೆಟ್ಟಿ ಸ್ಮಾರಕ ಸ್ಥಾಪನೆ ವಿಚಾರ ಬಗ್ಗೆ ಸರ್ಕಾರಕ್ಕೆ ಪ್ರಸ್ತಾಪ ಬಂದಿದ್ದು, ಪೊಲೀಸ್ ತರಬೇತಿ ಶಾಲೆಗೂ ಮಧುಕರ್ ಹೆಸರಿಡಬೇಕೆಂಬುವುದು ಹಲವರ ಆಶಯ. ಜನರ ಹಾಗೂ ಪೊಲೀಸರ ಬೇಡಿಕೆಗಳಿಗೆ ನಾವು ಬೆಲೆ ಕೊಡುತ್ತೇವೆ. ಈ ಎರಡು ಪ್ರಸ್ತಾಪಗಳು ಸರ್ಕಾರದ ಮುಂದಿದ್ದು ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.