ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ಬಂಧಿಸಲಾಗಿದೆ.
5 ಮಂದಿಯನ್ನು ಬಂಧಿಸಿದ ಉಪ್ಪಿನಂಗಡಿ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಚಂದ್ರಾಕ್ಷ, ಸಂದೀಪ್ ಕುಮಾರ್, ಹರ್ಷ ಯಾನೆ ರವಿ, ಲವ ಕುಮಾರ್ ಯಾನೆ ಲವ ಹಾಗೂ ಲಕ್ಷ್ಮೀಶ ಯಾನೆ ಚರಣ್ ಬಂಧಿತ ಆರೋಪಿಗಳು.
ಪ್ರಕರಣಕ್ಕೆ ಸಂಬಂಧಿಸಿ ಚಂದ್ರಾಕ್ಷ ಎಂಬಾತನ ಮೇಲೆ ಬಾಲಕಿಯ ಅಪಹರಣ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾದರೆ, ಉಳಿದ ಆರೋಪಿಗಳ ಮೇಲೆ ಪೋಕ್ಸೊ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಮಿಥುನ್ ಎಂಬಾತ ತಲೆಮರೆಸಿಕೊಂಡಿದ್ದಾನೆ.
ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ಜು. 17ರ ಬೆಳಿಗ್ಗೆ ಮನೆಯಿಂದ ನಾಪತ್ತೆಯಾಗಿದ್ದಳು. ಮನೆಮಂದಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದರು.
ಪೊಲೀಸರು 16 ವಯಸ್ಸಿನ ಬಾಲಕಿ ಬೆಂಗಳೂರಿಗೆ ಪರಾರಿಯಾಗುವ ಯತ್ನದಲ್ಲಿದ್ದಾಗ ಹಾಸನದಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಬಾಲಕಿ ಮನೆಯಿಂದ ಚಂದ್ರಾಕ್ಷ ಎಂಬಾತನೊಂದಿಗೆ ತೆರಳಿದ್ದು, ಈತ ಆಕೆಯನ್ನು ಅತ್ಯಾಚಾರ ನಡೆಸಿ, ಬೆಂಗಳೂರಿನಲ್ಲಿರುವ ತನ್ನ ಚಿಕ್ಕಮ್ಮನ ಮನೆಯಲ್ಲಿರಿಸಲು ಸಿದ್ಧತೆ ನಡೆಸಿ, ಅದರಂತೆ ಬೆಂಗಳೂರಿಗೆ ಕಳುಹಿಸುವ ಸಿದ್ಧತೆ ಮಾಡಿದ್ದ ಎನ್ನುವ ಮಾಹಿತಿ ಪೊಲೀಸರಿಗೆ ಲಭಿಸಿ ಬಳಿಕ ಆಕೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಬಾಲಕಿಯ ಮೊಬೈಲ್ ಫೋನ್ ತೆಗೆದು ಕಾಲ್ ಡಿಟೇಲ್ಸ್ ಪರಿಶೀಲಿಸಿದಾಗ ಹಲವರಲ್ಲಿ ಸಂಪರ್ಕ ಇರುವುದು ತಿಳಿದು ಬಂದು, ಇನ್ನಷ್ಟು ವಿಚಾರಣೆ ನಡೆಸಿದಾಗ ಒಟ್ಟು ಆರು ಮಂದಿ ಬೇರೆ ಬೇರೆ ದಿನಗಳಲ್ಲಿ ಬೇರೆ ಬೇರೆ ಕಡೆ ಅತ್ಯಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ. ಇವರಲ್ಲಿ ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಒಬ್ಬನ ಬಂಧನ ಇನ್ನಷ್ಟೇ ಆಗಬೇಕಿದೆ. ಬಾಲಕಿಯನ್ನು ಸಲಹಾ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.