ಚೆನ್ನೈ (ತಮಿಳುನಾಡು): ಭಾರತದ ಚಂದ್ರಯಾನ 3 ಯೋಜನೆಯು ಚಂದ್ರನ ಮೇಲೆ ಮಾನವ ವಾಸಸ್ಥಾನದ ಸಾಧ್ಯತೆಗಳನ್ನು ಅನ್ವೇಷಿಸಲಿದೆ.ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ನಿಗದಿತ ಉಡಾವಣಾ ಸಮಯದ ಪ್ರಕಾರ, ಜಿಎಸ್ಎಲ್ವಿ ಮಾರ್ಕ್ 3 (ಎಲ್ವಿಎಂ 3) ಹೆವಿ ಲಿಫ್ಟ್ ಉಡಾವಣಾ ವಾಹನದಿಂದ ಚಂದ್ರಯಾನ-3 ಉಪಗ್ರಹ ಯಶಸ್ವಿಯಾಗಿ ಇಸ್ರೋ ವಿಜ್ಞಾನಿಗಳು ಉಡಾವಣೆ ಮಾಡಿದ್ದಾರೆ. ಇಂದು ತಮಿಳುನಾಡಿನ ಚೆನ್ನೈನಲ್ಲಿ ಮಾತನಾಡಿದ ಸಚಿವ ಜಿತೇಂದ್ರ ಸಿಂಗ್, ಚಂದ್ರಯಾನವು ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಭಾರತವನ್ನು ಪ್ರಮುಖ ಜಾಗತಿಕ ಆಟಗಾರನನ್ನಾಗಿ ಮಾಡಲಿದೆ ಎಂದು ಹೇಳಿದರು.ಇದರ ಫಲಿತಾಂಶಗಳು ಭಾರತಕ್ಕೆ ಬಹು ಹಂತದ ಪ್ರಯೋಜನವಾಗಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.ಯಶಸ್ವಿಯಾಗಿ ಉಡ್ಡಯನಗೊಂಡ ಭಾರತದ ಚಂದ್ರಯಾನ 3 ಮಿಷನ್ ಚಂದ್ರನ ಮೇಲೆ ಮಾನವ ವಾಸಸ್ಥಾನದ ಸಾಧ್ಯತೆಗಳನ್ನು ಅನ್ವೇಷಿಸಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಚಂದ್ರಯಾನ ಸರಣಿಯು ಚಂದ್ರನ ಮೇಲೆ ನೀರಿನ ಅನ್ವೇಷಿಸುವ ಶ್ರೇಯಸ್ಸು ಪಡೆದಿದೆ. ನಾವು ನಮ್ಮ ಬಾಹ್ಯಾಕಾಶ ಪ್ರಯಾಣವನ್ನು ಇತರ ದೇಶಗಳಿಗಿಂತ ಬಹಳ ತಡವಾಗಿ ಪ್ರಾರಂಭಿಸಿದ್ದೇವೆ. ಆದರೂ, ನಮಗೆ ಮೊದಲು ಚಂದ್ರನ ಮೇಲೆ ಇಳಿದವರಿಗೆ ಆ ಸಂಶೋಧನೆಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಈಗ ಚಂದ್ರಯಾನ 3 ಭವಿಷ್ಯದಲ್ಲಿ ಬಹುಶಃ ಚಂದ್ರನ ಮೇಲೆ ಮಾನವ ಆವಾಸಸ್ಥಾನದ ಸಾಧ್ಯತೆ ಸೂಚಿಸುವ ಅಥವಾ ಸುಳಿವು ನೀಡುವ ಪ್ರಯೋಗಗಳ ಅನ್ವೇಷನೆಯನ್ನು ವಿಸ್ತರಿಸಲಿದೆ ಎಂದು ಮಾಹಿತಿ ನೀಡಿದರು.
ಚಂದ್ರಯಾನ 3ರ ಬಾಹ್ಯಾಕಾಶ ನೌಕೆ ಚಂದ್ರನ ಮೇಲೆ ಮೃದು ಲ್ಯಾಂಡಿಂಗ್ ಮೇಲೆ ಭಾರತ ಮಾತ್ರವಲ್ಲದೇ ಇಡೀ ಜಗತ್ತು ಎದುರು ನೋಡುತ್ತಿದೆ. ಯಾಕೆಂದರೆ, ಇದುವರೆಗೆ ಅಮೆರಿಕ, ಚೀನಾ, ರಷ್ಯಾ ರಾಷ್ಟ್ರಗಳು ಮಾತ್ರ ಯಶಸ್ವಿಯಾಗಿ ಚಂದ್ರನ ಮೇಲೆ ಯಶಸ್ವಿಯಾಗಿ ಗಗನ ನೌಕೆಯನ್ನು ಇಳಿಸಿವೆ. ಈ ಚಂದ್ರಯಾನ 3 ಸುರಕ್ಷಿತ ಮತ್ತು ಮೃದು ಲ್ಯಾಂಡಿಂಗ್ ಆದರೆ, ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರ ಭಾರತವಾಗಲಿದೆ. ಚಂದ್ರಯಾನ-3 ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ಹೊಂದಿದ್ದು, ಚಂದ್ರನ ದಕ್ಷಿಣದ ಧ್ರುವದಲ್ಲಿ ರೋವರ್ ಲ್ಯಾಂಡಿಂಗ್ ಆಗುವ ಗುರಿ ಹೊಂದಲಾಗಿದೆ.
ಬಾಹ್ಯಾಕಾಶ ನೌಕೆ ಪ್ರಯಾಣವು ಭೂಮಿಯಿಂದ ಚಂದ್ರನವರೆಗೆ ಸುಮಾರು ಒಂದು ತಿಂಗಳು ತೆಗೆದುಕೊಳ್ಳುತ್ತದೆ ಎಂದು ಅಂದಾಜಿಸಲಾಗಿದ್ದು, ಆಗಸ್ಟ್ 23ರಂದು ಮೃದು ಲ್ಯಾಂಡಿಂಗ್ ಆಗುವ ನಿರೀಕ್ಷೆಯನ್ನು ಹೊಂದಿದೆ. ಗಗನ ನೌಕೆಯು ಚಂದ್ರನ ಮೇಲೆ ಇಳಿದ ನಂತರ ಒಂದು ದಿನ ಕಾರ್ಯನಿರ್ವಹಿಸುತ್ತದೆ. ಚಂದ್ರನ ಮೇಲಿನ ಒಂದು ದಿನವು ಭೂಮಿಯ ಮೇಲಿನ 14 ದಿನಗಳಿಗೆ ಸಮಾನವಾಗಿದೆ.