ಜ.31 ರಿಂದ ಏ. 6ರವರೆಗೆ ಕೇಂದ್ರ ಬಜೆಟ್ ಅಧಿವೇಶನ: ಪ್ರಹ್ಲಾದ್ ಜೋಶಿ

ನವದೆಹಲಿ: 2023ರ ಬಜೆಟ್ ಅಧಿವೇಶನ ಜನವರಿ 31ರಂದು ಆರಂಭಗೊಂಡು ಎಪ್ರಿಲ್ 6ರ ವರೆಗೆ ನಡೆಯಲಿದೆ. 27 ಅವಧಿಯ ಅಧಿವೇಶನ ಒಟ್ಟು 66 ದಿನಗಳವರೆಗೆ ನಡೆಯಲಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸದ ಈ ವಿಶೇಷ ಸಂದರ್ಭದಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ, ಬಜೆಟ್ ಮಂಡನೆ ಹಾಗೂ ಇತರ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು.

ಈ ಅಧಿವೇಶನದ ಸಂದರ್ಭದಲ್ಲಿ, ಸಂಸತ್ತಿನ ಸ್ಥಾಯಿ ಸಮಿತಿ ಎದುರಿರುವ ಹಲವು ರಾಜ್ಯಗಳ ಅನುದಾನಗಳ ಬೇಡಿಕೆ ಕುರಿತು ನಿರ್ಣಯ ಕೈಗೊಳ್ಳಲು ಹಾಗೂ ವಿವಿಧ ಸಚಿವಾಲಯಗಳಿಗೆ ಸಂಬಂಧಪಟ್ಟ ವಿಷಯಗಳ ಕುರಿತು ವರದಿ ಸಿದ್ಧ ಪಡಿಸಲು ಫೆಬ್ರವರಿ 14 ರಿಂದ ಮಾರ್ಚ್ 12ರ ವರೆಗೆ ವಿರಾಮ ಪಡೆಯಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಈ ಮಧ್ಯೆ ಬಜೆಟ್ ಮಂಡನೆಗೆ ಪೂರ್ವಾಭಾವಿಯಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನೀತಿ ಆಯೋಗ ಮತ್ತು ಆರ್ಥಿಕತಜ್ಞರ ಸಭೆ ನಡೆಯುತ್ತಿದೆ. ಕಳೆದ ಎರಡು ವರ್ಷಗಳ ಬಜೆಟ್ ಮಧ್ಯಮವರ್ಗದವರಿಗೆ ನಿರಾಶಾದಾಯಕವಾಗಿದ್ದು, ಈ ಬಾರಿಯಾದರೂ ಸಂತಸದ ಸುದ್ದಿ ದೊರೆಯುವುದೇ ಎಂದು ಜನರು ಕಾತರರಾಗಿದ್ದಾರೆ.