ನಿನ್ನೆ ಮೊನ್ನೆ ನಮ್ಮೊಂದಿಗೆ ಹರಟೆ ಹೊಡೆಯುತ್ತಿದ್ದವರು ಈಗಿಲ್ಲ ಅಂದರೆ ನಂಬೋದು ಹೇಗೆ?:ಶ್ರದ್ದಾ ಬರೆದ ಬರಹ

ಶ್ರದ್ಧಾ ಪೂಜಾರಿ  ದ್ವಿತೀಯ ಬಿ.ಎ ಪತ್ರಿಕೋದ್ಯಮ ವಿಭಾಗ ಎಂ.ಪಿ.ಎಂ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ

ಜೀವನ ಎಷ್ಟೊಂದು ವಿಚಿತ್ರ ಅಲ್ವಾ? ನಿನ್ನೆ ಮೊನ್ನೆ ಎಲ್ಲಾ ಹಕ್ಕಿಯಂತೆ ಹಾಯಾಗಿ ಹಾರಾಡುತ್ತ ಇದ್ದ ನಾವು ಈಗ ಪಂಜರದ ಹಕ್ಕಿಯಂತೆ ಬಂಧಿಯಾಗಿದ್ದೇವೆ. ಬೆನ್ನು ಹಿಡಿದ ಬೇತಾಳನಂತೆ ಈ ರೋಗ  ನಮ್ಮನ್ನು ಹಿಂಬಾಲಿಸುತ್ತಿದೆ. ಇತ್ತೀಚೆಗೆ ಮಳೆಗಾಲದ ಹೊತ್ತಿನಲ್ಲಿ ಬರುವ ಶೀತ ಜ್ವರಗಳಿಗೂ ಕರೋನಾ ಎನ್ನುವಂತಾಗಿದೆ. ಜನರು ಈ ವೈರಸ್ ಗೆ ಎಷ್ಟು ಬೆಂದು ಹೋಗಿದ್ದಾರೆ ಎಂದರೆ ಸಾಮಾನ್ಯ ಜ್ವರಕ್ಕೂ ಮದ್ದು ತರಲು ಹೋಗಲು ಹಿಂದೆ ಮುಂದೆ ನೋಡುತ್ತಾರೆ. ಇತ್ತೀಚೆಗೆ ಹಳ್ಳಿ ಪ್ರದೇಶದ ಬಡಕುಟುಂಬಗಳಿಗೆ ಕೊರೋನಾ ವೈರಸ್ ಗೆ ತುತ್ತಾಗುತ್ತಿದ್ದಾರೆ. ಹಳ್ಳಿ ಜನರೇ ಟಾರ್ಗೆಟ್ ಎನ್ನುವ ಹಾಗಿದೆ.

ಸಾಮಾನ್ಯವಾಗಿ ಜನರು ಕೋವಿಡ್ ವೈರಸ್ ಬಾರದಂತೆ ಲಸಿಕೆ(ವ್ಯಾಕ್ಸಿನ್ ) ಪಡೆದರೂ ಅದರ ಪ್ರಯೋಜನವೇನು ಎನ್ನುವ ಅರಿವು ಯಾರಿಗೂ ಆಗುತ್ತಿಲ್ಲ . ಯಾವ ರೋಗ ಬಂದಿದೆ ಎನ್ನುವ ಕಾರಣ ತಿಳಿಯದೆ ಅದೆಷ್ಟೋ ಜನರು ಮೌನವಾಗಿ ನಿದ್ದೆಗೆ ಜಾರಿದ್ದಾರೆ. ನಿನ್ನೆ ನಮ್ಮೊಂದಿಗೆ ಕುಳಿತು ಹರಟೆ ಹೊಡೆದವರು ಇಂದು ಒಬ್ಬರೇ ಚಿತೆಯ ಮೇಲೆ ಮಲಗಿದ್ದಾರೆ, ನಮ್ಮೊಂದಿಗಿಲ್ಲ ಎನ್ನುವುದನ್ನು ನಂಬೋದು ಹೇಗೆ ಹೇಳಿ?

ಬಡ ಆರೋಗ್ಯವಂತ ವ್ಯಕ್ತಿಯೋರ್ವ ಮಾಡಿದ ಕೋವಿಡ್ ಟೆಸ್ಟ್ ನಲ್ಲಿ ರಿಪೋರ್ಟ್ ಪಾಸಿಟಿವ್ ಎಂದು ಬರುತ್ತೆ. ಅವರಿಗೆ ಸರಿಯಾದ ಚಿಕಿತ್ಸೆಯೂ ಸಿಗುತ್ತಿಲ್ಲ. ಅದೇ ಶ್ರೀಮಂತ ವ್ಯಕ್ತಿ ಆಸ್ಪತ್ರೆಯಲ್ಲಿ ಅವನು ಸುರಿಸಿದ ಹಣದಿಂದ ಎಲ್ಲವೂ ಬೇಗ ಸಿಗುತ್ತಿದೆ.

ಒಬ್ಬನ ಜೀವನ ಸಾಗುವುದು ಸಂಪಾದನೆಯಿಂದ ಮಾತ್ರವಲ್ಲ, ಅವನ ವ್ಯಕ್ತಿತ್ವದಿಂದಲೂ ಹೌದು. ಕಳೆದ ವರುಷದಂತೆ ಈ ವರುಷವೂ ಜನರ ಮನಃಸ್ಥಿತಿ ಒಂದೇ ರೀತಿ ಇರುತ್ತಿದ್ದರೆ ಇಷ್ಟು ದಿನದ ವನವಾಸ ಬೇಕಿರಲಿಲ್ಲವೇನೋ, ಆದರೆ ಜನಗಳು ಬೇಕಾಬಿಟ್ಟಿ ಓಡಾಡುದನ್ನು ಕಡಿಮೆ ಮಾಡುತ್ತಲೇ ಇಲ್ಲ ನೋಡಿ. ಇದು ಕೇವಲ ಜನರ ಸ್ವಾರ್ಥದ ಮನಸ್ಥಿತಿ ಮಾತ್ರವಲ್ಲ, ಅತಿಯಾದ ಆಸೆಯ ಫಲಯೆಂದರೆ ತಪ್ಪಾಗಲಾರದು.

ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶ ಮಾಡುತ್ತ  ಈಗ ತನ್ನ ವಿನಾಶದ ಕದವನ್ನು ಆತನೇ ತೆರೆಸಿಕೊಡಿದ್ದಾನೆ. ಆತನ ದುರಾಸೆಗೆ ಇಂದು ಉಸಿರನ್ನು ಬೆಲೆಕೊಟ್ಟು ತೆಗೆದುಕೊಳ್ಳುವ ಪರಿಸ್ಥಿತಿಯನ್ನು ತಾನೇ ಸೃಷ್ಟಿಸಿಕೊಂಡಿದ್ದಾನೆ.
ಇನ್ನಾದರೂ ನಮ್ಮ ಸ್ವಾರ್ಥವನ್ನು ಬದಿಗಿಟ್ಟು, ರಾಜಕೀಯ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಗಳನ್ನು ಸ್ವಲ್ಪ ದಿನದ ಮಟ್ಟಿಗೆ ಸ್ತಬ್ದವಾಗಿರಿಸಿ ಭೂಮಂಡಲದ ಮೇಲೆ ಸೃಷ್ಟಿಯಾಗಿರುವ ವೈರಸ್ ನ ವಿನಾಶವನ್ನು ಕಾಣೋಣ.

ಮಾಮೂಲಿ ಬರುವ ಸಣ್ಣ ಪುಟ್ಟ ನೆಗಡಿ ಕೆಮ್ಮಿಗೆಲ್ಲಾ ಕೋವಿಡ್ 19ಯೆಂದು ಹೆಸರು ನೀಡಿ. ಮಾನಸಿಕವಾಗಿ ಕುಗ್ಗಬೇಡಿ. ಮನಸ್ಸು ಗಟ್ಟಿ ಮಾಡಿಕೊಂಡು  ಕುಟಂಬ ವೈದ್ಯರ ಸಲಹೆ ಪಡೀರಿ. ಮೊದಲು ಮನಸ್ಸನ್ನು ಗಟ್ಟಿ ಮಾಡಲು ಕಲಿಯಿರಿ. ಧೈರ್ಯವೇ ಇಲ್ಲಿ ಮುಖ್ಯವಾಗಲಿ. ಒಮ್ಮೊಮ್ಮೆ ಕೊರೋನಾ ನಿಯಮಗಳು ನಿಮಗೆ ನಿಯಮಗಳು ಕಿರಿಕಿರಿಯಾಗಿ ಕಾಣಬಹುದು. ಆದರೆ ಅದನ್ನು ಅನುಸರಿಸಿ ನೋಡಿದಾಗ ಮಾತ್ರ ಆ ನಿಯಮದ ಮಹತ್ವ ತಿಳಿಯುವುದು. ಇನ್ನಾದರೂ ಎಚ್ಚೆತ್ತುಕೊಳ್ಳೋಣ.

ಕೋವಿಡ್ 19 ವೈರಸ್ ವಿರುದ್ಧ ಹೊರಾಡೋಣ. ಹೆಚ್ಚುತ್ತಿರುವ ಮರಣ ಪ್ರಮಾಣವನ್ನು ತಡೆಹಿಡಿಯೋಣ, ಸಾಮಾನ್ಯ ಜನರ ಜೀವನ ಅದಾಗಲೇ ಅಲ್ಲೋಲ ಕಲ್ಲೋಲವಾಗಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅರ್ಥವೇ ಇಲ್ಲದಾಗಿದೆ. ಇನ್ನೇನೂ ತಾನು ದುಡಿದು ಸಂಪಾದಿಸಿದ ಸಂಪಾದನೆಯಿಂದ ತನ್ನ ಕುಟುಂಬ ನಿರ್ವಹಣೆಯ ಕನಸು ಹೊತ್ತ ಕಂಗಳು ಮಂಜಾದಂತೆ ಕಾಣುತ್ತಿದೆ. ನಾವು ಇನ್ನೂ ನಿರ್ಲಕ್ಷ ಮಾಡಿದರೆ ಲೋಕದ ಕಣ್ಣುಗಳು ಬಾಡುತ್ತದೆ. ಹಾಗಾಗದಂತೆ ನೋಡಿಕೊಳ್ಳೋಣ. ಆದಷ್ಟು ಬೇಗನೆ ಈ ಎಲ್ಲಾ ಸಮಸ್ಯೆಗೆ ಪರಿಹಾರ ಒದಗಿ ಹೊಸ ಯೋಚನೆ ಯೋಜನೆಯೊಂದಿಗೆ ಜೀವನ ಸಾಗಿಯೇ ಸಾಗುತ್ತದೆ ಅನ್ನೋ ಭರವಸೆ ಇರಲಿ.