ಉಡುಪಿ: ಮತ ಎಣಿಕೆಯ ದಿನ ಸಿಡಿಮದ್ದು, ಮದ್ಯ ಮಾರಾಟ ನಿಷೇಧ

ಉಡುಪಿ, :ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆಯು ಮೇ 23 ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಜಿಲ್ಲೆಯ ಸಾರ್ವಜನಿಕ ಹಿತದೃಷ್ಟಿಯಿಂದ, ಕಾನೂನು ಸುವ್ಯವಸ್ಥೆ, ಶಾಂತಿಪಾಲನೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ

  ಮತ ಎಣಿಕೆಯ ಫಲಿತಾಂಶದ ವಿಜಯೋತ್ಸವದ ಸಮಯದಲ್ಲಿ ಪಟಾಕಿ/ ಸಿಡಿಮದ್ದು ಸಿಡಿಸುವುದನ್ನು ತಡೆಗಟ್ಟುವ ಸಲುವಾಗಿ ಅವುಗಳ ಮಾರಾಟವನ್ನು ನಿಷೇಧಿಸುವುದು ಅಗತ್ಯವೆಂದು ಮನಗಂಡು, ಮೇ 22 ರಂದು ಬೆಳಗ್ಗೆ 10 ಗಂಟೆಯಿಂದ ಮೇ 24 ರ ಸಂಜೆ 5 ಗಂಟೆಯವರೆಗೆ ಜಿಲ್ಲೆಯಾದ್ಯಂತ ಯಾವುದೇ ರೀತಿಯ ಪಟಾಕಿ/ ಸಿಡಿಮದ್ದು ಸಿಡಿಸುವುದನ್ನು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿ ಮತ್ತು ಅಂಗಡಿ/ ಮಳಿಗೆಗಳನ್ನು ಮುಚ್ಚಲು ಆದೇಶಿಸಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿದ್ದಾರೆ.

 ಮದ್ಯ ಮಾರಾಟ ನಿಷೇಧ

 ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮೇ 22 ರಂದು ಸಂಜೆ 6 ಗಂಟೆಯಿಂದ ಮೇ 24 ರ ಬೆಳಗ್ಗೆ 6 ಗಂಟೆಯವರೆಗೆ ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಮದ್ಯದಂಗಡಿಗಳನ್ನು, ಮದ್ಯ ಮಾರಾಟ ಡಿಪೋಗಳನ್ನು, ಮದ್ಯ ತಯಾರಿಕಾ ಡಿಸ್ಟಲರಿಗಳನ್ನು, ಸ್ಟಾರ್ ಹೋಟೆಲ್‍ಗಳನ್ನು, ಶೇಂದಿ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶಿಸಿದ್ದಾರೆ.