ಉತ್ತರೆಯ ಆರ್ಭಟಕ್ಕೆ ಉಡುಪಿ ಮುಳುಗಡೆ: ಅಪಾಯದ ಭೀತಿಯಲ್ಲಿ ಸಿಲುಕಿದ ಸಾವಿರಾರು ಕುಟುಂಬ

ಉಡುಪಿ: ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಉಡುಪಿಯ ತಗ್ಗುಪ್ರದೇಶಗಳು ಸಂಪೂರ್ಣ ಮುಳುಗಡೆಯಾಗಿದೆ. ಸಾವಿರಾರು ಕುಟುಂಬಗಳು ಅಪಾಯದಲ್ಲಿ ಸಿಲುಕ್ಕಿದ್ದು, ಜಿಲ್ಲಾಡಳಿತ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.
ಉತ್ತರೆ ಮಳೆಯ ರೌದ್ರಾವತರಕ್ಕೆ ಉಡುಪಿ ನಗರವೂ ಸೇರಿದಂತೆ ಜಿಲ್ಲೆಯ ಹಲವೆಡೆ ಪ್ರವಾಹ ಉಂಟಾಗಿದೆ.

ನಿನ್ನೆ ಮಧ್ಯಾಹ್ನದಿಂದ ಹಿಡಿದು ರಾತ್ರಿ ಪೂರ್ತಿ ಧಾರಾಕಾರ ವರ್ಷಧಾರೆಯಾಗಿದೆ. ಇದರಿಂದ ನಗರದ ಮಧ್ಯದಲ್ಲಿ ಹರಿಯುವ ಇಂದ್ರಾಣಿ ಹೊಳೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೊಳೆ ಪಾತ್ರದ ನೂರಾರು ಮನೆಗಳಿಗೆ ನೀರು ನುಗ್ಗಿದೆ. ಬೈಲಕೆರೆ, ಮಠದ ಬೆಟ್ಟು, ಕಲ್ಸಂಕ, ಬಡಗುಪೇಟೆ, ಬನ್ನಂಜೆ, ನಿಟ್ಟೂರು ಸಹಿತ ಎಲ್ಲೆಡೆ ಮನೆಗಳಿಗೆ, ಅಂಗಡಿಗಳಿಗೆ ನೀರು ನುಗ್ಗಿದೆ. ಉಡುಪಿ-ಮಣಿಪಾಲ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

   

ನಗರದ ಹೊರವಲಯದಲ್ಲಿ ಅಲೆವೂರು, ಕೆಮ್ತೂರು, ಉದ್ಯಾವರ, ಬೊಳ್ಜೆ, ಬಲೈಪಾದೆ, ಮಟ್ಟು, ಬನ್ನಂಜೆ, ಕಲ್ಮಾಡಿಯ ಸಹಿತ ನೂರಾರು ಮನೆಗಳಿಗೆ ನೆರೆ ನೀರು ತುಂಬಿದೆ.

ಉಡುಪಿಯಲ್ಲಿ ಸುಮಾರು ಐವತ್ತು ವರ್ಷಗಳ ಬಳಿಕ ಕಲ್ಸಂಕದಲ್ಲಿ ಹಾದುಹೋಗುವ ಇಂದ್ರಾಣಿ ಹೊಳೆ ಉಕ್ಕಿ ಹರಿದಿದೆ. ಇದರಿಂದ ಕಲ್ಸಂಕ ವೃತ್ತ ಸಂಪೂರ್ಣ ಮುಳುಗಡೆಯಾಗಿದೆ. ಕೃಷ್ಣಮಠಕ್ಕೂ ನೀರು ನುಗ್ಗಿದೆ. ರಾಜಾಂಗಣ ಸಂಪೂರ್ಣ ಜಲಾವೃತಗೊಂಡಿದೆ.
ಉಡುಪಿ ಗುಂಡಿಬೈಲು, ಅಂಬಲಪಾಡಿ, ಮಠದ ಬೆಟ್ಟು, ಬೈಲಕೆರೆ ನಿಟ್ಟೂರು ಕೊಡಂಕೂರು ಚಿಟ್ಪಾಡಿ ಪ್ರದೇಶದಲ್ಲಿ ಕೃತಕ ನೆರೆ ಉಂಟಾಗಿದ್ದು 4 ದಶಕಗಳ ಬಳಿಕ ಉಡುಪಿಯಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ನೆರೆ ಉಂಟಾಗಿದೆ.

ತಗ್ಗು ಪ್ರದೇಶದಲ್ಲಿ ಸಿಕ್ಕಿಬಿದ್ದವರನ್ನು ರಕ್ಷಿಸಿದ ಅಗ್ನಿಶಾಮಕ ದಳ,‌ ಪೊಲೀಸ್ ಸಿಬ್ಬಂದಿಗಳು ದೋಣಿಯಲ್ಲಿ ರಕ್ಷಣೆ ಕಾರ್ಯಚರಣೆ ‌ನಡೆಸುತ್ತಿದ್ದಾರೆ.

ಭೀಕರ ಮಳೆಯ ಪರಿಣಾಮ ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಆವರಣ, ನಗರದ ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು. ನಗರದ ಅಂಗಡಿ ಗೋದಾಮುಗಳಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಭಾರಿಯ ಮಳೆಯ ಪರಿಣಾಮ ಸ್ವರ್ಣ, ಸೀತನದಿ ಉಕ್ಕಿ ಹರಿಯುತ್ತಿದೆ. ಮಲ್ಪೆ-ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ಪುತ್ತಿಗೆ ಭಾಗದಲ್ಲಿ ಕೃತಕ ನೆರೆಯಿಂದಾಗಿ ಮನೆಗಳು ಸಂಪೂರ್ಣ ಜಲಾವೃತವಾಗಿದ್ದು ಮನೆಯೊಳಗೆ ನೀರು ನುಗ್ಗಿ ಗೋಡೆ ಕುಸಿದ ಘಟನೆ ಸಂಭವಿಸಿದೆ.

ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸೆ.20ರಿಂದ 22ರವರೆಗೆ ಗುಡುಗು ಸಹಿತ ಭಾರೀ ಮಳೆ ನಿರೀಕ್ಷೆ ಇದೆ.
ವರುಣನ ಆರ್ಭಟ ನಿಲ್ಲದಿದ್ದರೆ ಉಡುಪಿ ನಗರ ಪ್ರದೇಶ ಸಹಿತ ತಗ್ಗುಪ್ರದೇಶಗಳು ಸಂಪೂರ್ಣ ಮುಳುಗಡೆಯಾಗುವ ಅಪಾಯ ಎದುರಾಗಿದೆ.