ಟಿಎಂಎ ಪೈ ದೇಶಕ್ಕೆ ಸಲ್ಲಿಸಿದ ಸೇವೆ ಅಪೂರ್ವವಾದುದು: ಪೇಜಾವರ ಶ್ರೀ

ಉಡುಪಿ: ಸರ್ಕಾರದ ಹೊರತಾಗಿಯೂ ಶಿಕ್ಷಣವನ್ನು ಬೆಳೆಸಬಹುದು ಎಂಬುವುದನ್ನು ಇಡೀ ದೇಶಕ್ಕೆ ತೋರಿಸಿಕೊಟ್ಟ ಸಾಧಕ ಮಾಧವ ಪೈ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಇಂದು ಮಣಿಪಾಲದ ಫಾರ್ಚೂನ್‌ ಇನ್‌ ವ್ಯಾಲಿ ವಿವ್ಯೂ  ಹೋಟೆಲ್‌ನ ಚೈತ್ಯ ಸಭಾಂಗಣದಲ್ಲಿ ನಡೆದ ಮಣಿಪಾಲ ಸಮೂಹ ಸಂಸ್ಥೆಗಳ 121ನೇ ಸಂಸ್ಥಾಪಕ ದಿನಾಚರಣೆ
ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕೆ ಅಂಟಿಕೊಂಡಿದ್ದ ಅಜ್ಞಾನ, ದಾರಿದ್ರ ಹಾಗೂ ಅನಾರೋಗ್ಯದ ಪಿಡುಗನ್ನು
ಹೋಗಲಾಡಿಸಿದ ಕೀರ್ತಿ ಡಾ. ಟಿಎಂಎ ಪೈ ಅವರಿಗೆ ಸಲ್ಲುತ್ತದೆ. ಅವರು ಅಜ್ಞಾನದ ನಿವಾರಣೆಗಾಗಿ ದೇಶದಾದ್ಯಂತ ಅನೇಕ ವಿದ್ಯಾಸಂಸ್ಥೆಗಳನ್ನು
ಸ್ಥಾಪಿಸಿದರು. ಸಿಂಡಿಕೇಟ್‌ ಬ್ಯಾಂಕ್‌ನ್ನು ಸ್ಥಾಪಿಸಿ ದೇಶದಲ್ಲಿದ್ದ ದಾರಿದ್ರವನ್ನು
ಹೋಗಲಾಡಿಸಿದರು. ಆಸ್ಪತ್ರೆಗಳನ್ನು ನಿರ್ಮಾಣ ಮಾಡುವ ಮೂಲಕ ಅನಾರೋಗ್ಯವನ್ನು ದೂರ
ಮಾಡಿದರು. ಅನೇಕ ಮಂದಿಗೆ ಉದ್ಯೋಗವನ್ನು ಕಲ್ಪಿಸಿಕೊಟ್ಟು ಬಡತನವನ್ನು ನಿವಾರಣೆ
ಮಾಡಿದರು ಎಂದರು.
ಟಿಎಂಎ ಪೈ ಮಾಡಿದ ಸಹಾಯವನ್ನು ಸ್ಮರಿಸಿದ ಪೇಜಾವರ ಶ್ರೀ: 
ನನ್ನ ಮೊದಲ ಪರ್ಯಾಯ ಸಂದರ್ಭದಲ್ಲಿ ಅಖಿಲ ಭಾರತ ಮಾಧ್ವತತ್ವ ಸಮ್ಮೇಳನವನ್ನು ಆಯೋಜಿಸಲು
ತೀರ್ಮಾನಿಸಲಾಗಿತ್ತು. ಆದರೆ ಇದಕ್ಕೆ ಕೆಲ ಮಠಾಧಿಪತಿಗಳು ಸೇರಿದಂತೆ ಅನೇಕ ಮಂದಿ
ವಿರೋಧ ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ನನ್ನ ಬೆಂಬಲಕ್ಕೆ ನಿಂತ ಮಾಧವ ಪೈಗಳು
‘ನಾನು ನಿಮ್ಮೊಂದಿಗೆ ಇದ್ದೇನೆ ನೀವು ಧೈರ್ಯವಾಗಿ ಸಮ್ಮೇಳನವನ್ನು ಮುಂದುವರಿಸಿ’ ಎಂದು
ಭರವಸೆ ನೀಡಿದರು. ಅಲ್ಲದೆ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸ್ಮರಿಸಿಕೊಂಡರು..
ನಾನು ಉಡುಪಿಗೆ ಬಂದು ಸಂನ್ಯಾಸ ಸ್ವೀಕರಿಸಿದ ದಿನದಿಂದಲೂ ನನ್ನ ಮತ್ತು ಮಾಧವ ಪೈಗಳ ನಡುವೆ ನಿಕಟ ಸಂಪರ್ಕವಿತ್ತು. ಪರ್ಯಾಯ ಹಾಗೂ ಇತರ ಸಂದರ್ಭಗಳಲ್ಲಿ ಯಾವುದಾದರೂ ಸಮಸ್ಯೆ ಎದುರಾದರೂ ಅವರು ಬಂದು ಸೂಕ್ತ ಸಲಹೆ ಸೂಚನೆಯನ್ನು ನೀಡುವುದರ ಜತೆಗೆ ಅಗತ್ಯ ಬೆಂಬಲವನ್ನು ನೀಡುತ್ತಿದ್ದರು. ಮಣಿಪಾಲ ವೈದ್ಯಕೀಯ ಕಾಲೇಜಿನ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಿದ್ದರು. ಆದರೆ ನಾನು ಮೊದಲ ಪರ್ಯಾಯದ ವ್ರತದಲ್ಲಿದ್ದೆ. ಆಗ ನನಗೆ ಇನ್ನು ಎಳೆಯ ವಯಸ್ಸಾಗಿದ್ದರಿಂದ ಸಂಪ್ರದಾಯವನ್ನು ಮುರಿದು ಹೋಗಲು ಆಗಲಿಲ್ಲ. ಆದ್ದರಿಂದ ಮಾಧವ ಪೈಗಳೇ ಶ್ರೀಕೃಷ್ಣಮಠಕ್ಕೆ ಆಗಮಿಸಿ, ವೈದ್ಯಕೀಯ ಕಾಲೇಜಿನ ಯಶಸ್ಸಿಗಾಗಿ ಕನಕ ಕಿಂಡಿಯ ಮೂಲಕ ದೇವರಿಗೆ ಪೂಜೆ ಸಲ್ಲಿಸಿದರು. ಪ್ರಾರ್ಥನೆ ಸಲ್ಲಿಸುವಾಗ ಅವರು ಕಣ್ಣೀರು ಹಾಕಿದ್ದರು ಎಂದು ಶ್ರೀಪಾದರು ಸ್ಮರಿಸಿದರು.
ಆ ಕಾಲಘಟದಲ್ಲಿ ದೇಶದಲ್ಲಿ ಬೆರಳೆಣಿಕೆಯ ಸರ್ಕಾರಿ ವೈದ್ಯಕೀಯ ಕಾಲೇಜು ಇದದ್ದು
ಬಿಟ್ಟರೆ, ಖಾಸಗಿ ವೈದ್ಯಕೀಯ ಕಾಲೇಜುಗಳು ಇರಲಿಲ್ಲ. ಅಂತಹ ವೇಳೆಯಲ್ಲಿ ಖಾಸಗಿ
ವೈದ್ಯಕೀಯ ಕಾಲೇಜು ನಿರ್ಮಾಣ ಮಾಡುವ ಸಾಹಸಕ್ಕೆ ಮಾಧವ ಪೈಗಳು ಕೈ ಹಾಕಿದ್ದು
ಮಾತ್ರವಲ್ಲ, ಅದರಲ್ಲಿ ಯಶಸ್ಸನ್ನು ಕಂಡರು. ಇಂದು ದೇಶದಲ್ಲಿ ಇಷ್ಟೊಂದು ವೈದ್ಯಕೀಯ
ಕಾಲೇಜು ನಿರ್ಮಾಣವಾಗಲು ಟಿಎಂಎ ಪೈಗಳ ಪ್ರೇರಣೆಯೇ ಕಾರಣ ಎಂದು ಅಭಿಪ್ರಾಯಪಟ್ಟರು.
ಟಿಎಂಎ ಪೈ ಫೌಂಡೇಶನ್‌ನ ಕಾರ್ಯದರ್ಶಿ ಟಿ. ಅಶೋಕ್‌ ಪೈ, ಎಂಇಎಂಜಿ ಸಂಸ್ಥೆಯ ಮುಖ್ಯಸ್ಥ
ಡಾ. ರಂಜನ್‌ ಆರ್‌. ಪೈ, ಮಂಗಳೂರು ಕೆಎಂಸಿ ಆಸ್ಪತ್ರೆಯ ಡೀನ್‌ ಡಾ. ಸಿ.ಆರ್‌.
ಕಾಮತ್‌, ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್‌. ಪೈ, ಎಂಎಂಎನ್‌ ಲಿಮಿಟೆಡ್‌ನ
ವ್ಯವಸ್ಥಾಪಕ ನಿರ್ದೇಶಕ ಸತೀಶ್‌ ಯು. ಪೈ ಉಪಸ್ಥಿತರಿದ್ದರು. ಮಾಹೆ ಸಹಕುಲಾಧಿಪತಿ ಡಾ.
ಎಚ್‌.ಎಸ್‌. ಬಲ್ಲಾಳ್‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.