ಸುವರ್ಣ ತ್ರಿಭುಜ ಬೋಟ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ- ಪ್ರಮೋದ್ ಮಧ್ವರಾಜ್ ಒತ್ತಾಯ

ಉಡುಪಿ: ಸುವರ್ಣ ತ್ರಿಭುಜ ದೋಣಿ ನಾಪತ್ತೆ ಪ್ರಕರಣದಲ್ಲಿ ಮೀನುಗಾರರ ಸಾವಿಗೆ ಕಾರಣವಾದ ಮತ್ತು ದೋಣಿಯನ್ನು ದುರಂತಕ್ಕೀಡು ಮಾಡಿದ ನೌಕಾದಳದ ಬೃಹತ್ ಯುದ್ದನೌಕೆ ಐಎನ್ ಎಸ್ ಕೋಚಿಯ ತಳಭಾಗದಲ್ಲಿ ಹಾನಿ ಆಗಿದೆಂದು ಹೇಳಲಾಗುತ್ತಿರುವ ಚಿತ್ರವೊಂದನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಇಂದು ಬಿಡುಗಡೆಗೊಳಿಸಿದ್ದಾರೆ.
ದೇಶದ ರಕ್ಷಣೆಗೆ ಮತ್ತು ಸಮುದ್ರದಲ್ಲಿ ಮೀನುಗಾರರ ರಕ್ಷಣೆಯ ಜವಾಬ್ದಾರಿ ಹೊತ್ತ ನೌಕೆಯ ಅಧಿಕಾರಿಗಳ ಬೇಜವ್ದಾರಿ ವರ್ತನೆಯಿಂದ ಈ ಘಟನೆ ಸಂಭವಿಸಿದ್ದು, ಇದು ಮೀನುಗಾರರ ಕೊಲೆ ಎಂದು ಹೇಳಬೇಕಾಗುತ್ತದೆ. ಪ್ರಧಾನಮಂತ್ರಿಗಳು ಪ್ರಕರಣದ ಗಂಭೀರತೆಯನ್ನು ಅರಿತು ಕೂಡಲೇ ಈ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ.
 ಲೋಕಸಭಾ ಚುನಾವಣೆಗೂ ಮೊದಲೇ ಈ ಬಗ್ಗೆ ಮೀನುಗಾರರಿಗೆ ಮಾಹಿತಿ ಸಿಕ್ಕಿದ್ದರೂ ಅದನ್ನು ಕೇಂದ್ರ ರಕ್ಷಣಾ ಇಲಾಖೆ ಮತ್ತು ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ಮರೆಮಾಚಿ ಗೌಪ್ಯವಾಗಿ ಇಡುವ ಪ್ರಯತ್ನ ಮಾಡಿದ್ದಾರೆ. ಬಿಜೆಪಿ ನಾಯಕರಿಗೆ ಮತ್ತು ಕೇಂದ್ರ ಸರಕಾರಕ್ಕೆ ತಾಕತ್ತಿದ್ದರೆ ಸುಪ್ರೀಂ ಕೊರ್ಟ್ ನ ನಿವೃತ್ತ ನ್ಯಾಯಾಧೀಶರ ನೇತೃತ್ವದ ನ್ಯಾಯಾಂಗ ತನಿಖೆಗೆ ಒಪ್ಪಿಸಿ ಈ ವಿಚಾರದ ಸತ್ಯಾಸತ್ಯಗಳನ್ನು  ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದ್ದಾರೆ.