ಉಡುಪಿ : ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಅರ್ಹ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂಬ ಹಿನ್ನೆಲೆಯಲ್ಲಿ, ಇನ್ನೂ ಕೂಡಾ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಲು ಬಾಕಿ ಇರುವ ಮತದಾರರು ಅದರಲ್ಲೂ ಪ್ರಮುಖವಾಗಿ ಯುವ ಹಾಗೂ ವಿಕಲಚೇತನ ಮತದಾರರಿಗೆ ತಮ್ಮ ಹೆಸರನ್ನು ನೊಂದಾಯಿಸಲು ಅನುಕೂಲವಾಗುವಂತೆ ಫೆ 23 ಮತ್ತು 24 ಹಾಗೂ ಮಾರ್ಚ್ 2 ಮತ್ತು 3 ರಂದು ಜಿಲ್ಲೆಯಲ್ಲಿರುವ ಎಲ್ಲಾ ಮತಗಟ್ಟೆಗಳಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳ ಸಮಕ್ಷಮದಲ್ಲಿ ವಿಶೇಷ ಆಂದೋಲನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಜಿಲ್ಲೆಯಲ್ಲಿ ಇನ್ನೂ ಕೂಡಾ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸಲು ಬಾಕಿ ಇರುವ ಮತದಾರರು ಈ ವಿಶೇಷ ಆಂದೋಲನದ ಸದುಪಯೋಗ ಪಡೆಯಬಹುದಾಗಿದೆ. ಹಾಗೂ ನಿಗಧಿ ಪಡಿಸಿದ ದಿನಗಳಂದು ಸಂಬಂಧ ಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿಗಳು ( ಬಿ.ಎಲ್.ಓ) ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ಅವರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರು ಮತದಾರ ಪಟ್ಟಿಗೆ ಹೆಸರು ನೊಂದಣಿ ಮಾಡಲು ನಮೂನೆ- 6 ನ್ನು, ತಿದ್ದುಪಡಿಗಾಗಿ ನಮೂನೆ-8 ನ್ನು ಹಾಗೂ ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ನಮೂನೆ-7 ನ್ನು ನಿಗದಿತ ನಮೂನೆಯಲ್ಲಿ ತಮ್ಮ ವಿಳಾಸ ವಿರುವ ಕ್ಷೇತ್ರದ ಮತಗಟ್ಟೆ ಹಂತದ ಅಧಿಕಾರಿ (ಬಿಎಲ್‍ಓ)ಗಳಿಗೆ ದಾಖಲೆಯೊಂದಿಗೆ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.