ಪೇಜಾವರ ಶ್ರೀಗಳಿಗೆ ಅರಳುಮರಳು: ದಿನೇಶ್ ಅಮೀನ್ ಮಟ್ಟು

 
ಉಡುಪಿ: ಪೇಜಾವರ ಸ್ವಾಮೀಜಿಗೆ ಅರಳುಮರಳು. ಅವರು ಕ್ಷಣಕೊಂದು ಮಾತನಾಡುತ್ತಾರೆ. ಹಾಗಾಗಿ ಅವರ ಮಾತುಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಚಿಂತಕ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.
ಉಡುಪಿ ಅಂಬೇಡ್ಕರ್ ಯುವಸೇನೆಯ ವತಿಯಿಂದ ಭಾನುವಾರ ಬನ್ನಂಜೆ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಅಂಬೇಡ್ಕರ್ ಯುವಜನೋತ್ಸವವನ್ನು ಸೇನೆಯ ಲಾಂಛನ ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸಿ  ಮಾತನಾಡಿದ ಅವರು, ಪೇಜಾವರ ಶ್ರೀಗಳು ರಾಮಮಂದಿರ ಕಟ್ಟುವ ಹೇಳಿಕೆಯನ್ನಾದರೂ ನೀಡಲಿ, ಸಂವಿಧಾನ ಬದಲಾವಣೆ ಹೇಳಿಕೆಯನ್ನಾದರೂ ನೀಡಲಿ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಆದರೆ, ದೇಶದ ಪ್ರಧಾನಿ ಅಥವಾ ಅವರ ಸಂಪುಟದ ಸಚಿವರು ಈ ರೀತಿ ಹೇಳಿಕೆ ನೀಡಿದರೆ ಅವರಿಗೆ ತಕ್ಕ ಉತ್ತರವನ್ನು ತಕ್ಕ ವೇದಿಕೆಯಲ್ಲಿ ನೀಡಬೇಕಾಗಿದೆ ಎಂದರು. 
ಉಡುಪಿ ಚಲೋ ಮಾಡಿದಾಗ ಪೇಜಾವರ ಶ್ರೀಗಳ ಕೆಲವು ತಲೆಕೆಟ್ಟ ಶಿಷ್ಯರು ಉಡುಪಿಯನ್ನು ಶುಚಿಗೊಳಿಸುತ್ತೇವೆ ಎಂದರು. ಇಂತಹ ಶಿಷ್ಯರನ್ನು ಇಟ್ಟುಕೊಂಡ ಗುರುಗಳು ಎಂಥವರಿರಬಹುದು ಎಂದು ತೀರ್ಮಾನ ಮಾಡಬೇಕಿದೆ. ದಲಿತರನ್ನು ನಿಂದನೆ ಮಾಡುವ ಸಚಿವರನ್ನು ಪ್ರಧಾನಿ ಮೋದಿ ಇನ್ನು ಕೂಡ ತನ್ನ ಸಂಪುಟದಲ್ಲಿ ಉಳಿಸಿಕೊಂಡಿದ್ದಾರೆ. ಇವರ ದಲಿತರ, ಅಂಬೇಡ್ಕರ ಮೇಲೆ ಇರುವ ಪ್ರೀತಿ ಹಾಗೂ ಸಂವಿಧಾನದ ಮೇಲಿನ ಗೌರವ ಏನು ಎಂಬುದು ಮುಂದಿನ ಚುನಾವಣೆಯಲ್ಲಿ ಉತ್ತರ ಕೊಡಬೇಕಾಗಿದೆ ಎಂದು ಹೇಳಿದರು. 
ಬಾರಕೋಲು ಪತ್ರಿಕೆಯ ಸಂಪಾದಕ ಬಿ.ಆರ್.ರಂಗಸ್ವಾಮಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆಗೈದರು. ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷ ಹರೀಶ್ ಸಾಲ್ಯಾನ್ ಮಲ್ಪೆ ವಹಿಸಿದ್ದರು.
ವೇದಿಕೆಯಲ್ಲಿ ಮಲ್ಪೆ ಪರಿಶಿಷ್ಟ ಜಾತಿ ಮೀನುಗಾರರ ಸಂಘದ ಅಧ್ಯಕ್ಷೆ ರಾಧ ತೊಟ್ಟಂ, ಯುವ ಮುಖಂಡರಾದ ಶಶಿಕಲಾ ಪಾಲನ್ ತೊಟ್ಟಂ, ದಿನೇಶ್ ಮೂಡುಬೆಟ್ಟು, ಅನಿಲ್ ಅಂಬಲಪಾಡಿ, ಸಂಪತ್ ಗುಜ್ಜರಬೆಟ್ಟು, ರಮೇಶ್ ಮಾಬೆನ್ ಅಮ್ಮುಂಜೆ, ಮಂಜುನಾಥ ಕಪ್ಪೆಟ್ಟು ಉಪಸ್ಥಿತರಿದ್ದರು. ದಲಿತ ಚಿಂತಕ ಜಯನ್ ಮಲ್ಪೆ ಮಾತನಾಡಿದರು. ಜಯ ಸಾಲ್ಯಾನ್ ಪಾಳೆಕಟ್ಟೆ ಸ್ವಾಗತಿಸಿದರು. ಭರತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.