ಗುಣಮಟ್ಟದ ಹೂಡಿಕೆ‌ ಮಾಡದಿದ್ದರೆ ಆರ್ಥಿಕ ನಷ್ಟ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಪ್ರಸ್ತುತ ಹೂಡಿಕೆದಾರರನ್ನು ಜಾಗೃತಿ ಮಾಡಬೇಕಾದ ಅವಶ್ಯಕತೆ ಇದೆ. ಹೂಡಿಕೆದಾರ ಜಾಗೃತನಾಗಿ ಗುಣಮಟ್ಟದ ಹೂಡಿಕೆ ಮಾಡದೇ ಹೋದರೆ ಸಮಾಜಕ್ಕೆ ಸಮಸ್ಯೆಯ ಜತೆಗೆ
ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ. ಹೂಡಿಕೆಯಲ್ಲಿ ಗುಣಮಟ್ಟ, ಜಾಗೃತಿ, ಅಂಕಿಅಂಶ ಅಗತ್ಯ. ಆಸೆಯ ಚೌಕಟ್ಟು ಮೀರಿ ಹೋಗಬಾರದು ಎಂದು ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಭಾರತೀಯ ಲೆಕ್ಕ ಪರಿಶೋಧಕರ ಸಂಘದ ಉಡುಪಿ ಶಾಖೆ ವತಿಯಿಂದ ನಗರದ ಡಯಾನಾ ಹೋಟೆಲ್‌ನ ಸಭಾಂಗಣದಲ್ಲಿ ಬುಧವಾರ ನಡೆದ ಹೂಡಿಕೆದಾರರ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಜಾಗೃತಿ ಮೀರಿ ಹೆಚ್ಚು ಧೈರ್ಯ ತೋರುತ್ತಿರುವ ಪರಿಣಾಮ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ಹೀಗಾಗಿ ಹಣದ ಆಸೆಯ ಚೌಕಟ್ಟು ಮೀರಿ ಸಾಹಸಕ್ಕೆ ಕೈ ಹಾಕಬಾರದು. ಮನ್ಸೂರ್ ಖಾನ್‌ನ ಬಹುಕೋಟಿ ವಂಚನೆಯ ಐಎಂಎ ಪ್ರಕರಣ ನಮ್ಮೆಲ್ಲರ ಮುಂದಿದೆ ಎಂದರು.
ಸಮಾಜ ಹೆಚ್ಚು ಜಾಗೃತವಾಗಬೇಕು. ನಾವು ಒಗ್ಗಟ್ಟಿನಲ್ಲಿ ಅಲೋಚಿಸಿ ನಿರ್ಧಾರ ಕೈಗೊಳ್ಳುವ ವ್ಯವಸ್ಥೆ ಜಾರಿಯಾದರೆ ಸಮಾಜಕ್ಕೆ ಒಳ್ಳೆಯ ಸಂದೇಶ ತಲುಪಲು ಸಾಧ್ಯ ಎಂದರು.
ಜಸ್ಟಿಸ್ ಕೆ.ಎಸ್. ಹೆಗ್ಡೆ ಇನ್ಸ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಎನ್‌ಎಂಎಎಂಐಟಿ ನಿಟ್ಟೆಯ ಪ್ರೊ. ರಾಧಾಕೃಷ ವಿಶೇಷ ಉಪನ್ಯಾಸ ನೀಡಿದರು.
ಭಾರತೀಯ ಲೆಕ್ಕ ಪರಿಶೋಧಕರ ಸಂಘ ಉಡುಪಿ ಜಿಲ್ಲಾ ಶಾಖೆ ಕಾರ್ಯದರ್ಶಿ ಕವಿತಾ ಎಂ. ಪೈ ಟಿ. ಉಪಸ್ಥಿತರಿದ್ದರು.
ಭಾರತೀಯ ಲೆಕ್ಕ ಪರಿಶೋಧಕರ ಸಂಘ ಉಡುಪಿ ಜಿಲ್ಲಾ ಶಾಖೆ ಅಧ್ಯಕ್ಷ ನರಸಿಂಹ ನಾಯಕ್ ಸ್ವಾಗತಿಸಿ, ಪ್ರದೀಪ್ ಜೋಗಿ ಕಾರ‍್ಯಕ್ರಮ ನಿರೂಪಿಸಿದರು.