ಪಡುಬಿದ್ರಿ: ನ್ಯಾಯಾಲಯದ ಆದೇಶದಂತೆ ಗಾಂಜಾ ನಾಶ

ಉಡುಪಿ: ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ವಶಪಡಿಸಿಕೊಂಡ ಗಾಂಜಾವನ್ನು ಪಡುಬಿದ್ರಿ ನಂದಿಕೂರಿನ ಕೈಗಾರಿಕಾ ವಲಯದಲ್ಲಿ ಸೋಮವಾರ ನ್ಯಾಯಾಲಯದ ಆದೇಶದಂತೆ ನಾಶಪಡಿಸಲಾಯಿತು.

ಜಿಲ್ಲೆಯ ಸೆನ್‌ ಅಪರಾಧ ಠಾಣೆಯ 11 ಪ್ರಕರಣಗಳಲ್ಲಿ 31.84 ಕೆ.ಜಿ., ಮಣಿಪಾಲ ಠಾಣೆಯ ನಾಲ್ಕು ಪ್ರಕರಣಗಳಲ್ಲಿ 1.56 ಕೆ.ಜಿ. ಹಾಗೂ ಉಡುಪಿ ನಗರ ಠಾಣೆಯ ಎರಡು ಪ್ರಕರಣಗಳಲ್ಲಿ 1.67 ಕೆ.ಜಿ. ಸೇರಿದಂತೆ ಒಟ್ಟು 17 ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡ ಒಟ್ಟು 32 ಕೆ.ಜಿ 883 ಗ್ರಾಂ ಗಾಂಜಾವನ್ನು ನಾಶಪಡಿಸಲಾಯಿತು.
ಈ ಪ್ರಕ್ರಿಯೆಯಲ್ಲಿ ಗಾಂಜಾ ವಿಲೇವಾರಿ ಸಮಿತಿ ಅಧ್ಯಕ್ಷರೂ ಆಗಿರುವ ಎಸ್ಪಿ‌ ಎನ್‌ವಿಷ್ಣುವರ್ಧನ, ಸಮಿತಿಯ ಸದಸ್ಯರಾಗಿರುವ ಡಿವೈಎಸ್ಪಿ ಜೈಶಂಕರ್‌, ಕಾಪು ಇನ್‌ಸ್ಪೆಕ್ಟರ್‌ ಮಹೇಶ್‌ಪ್ರಸಾದ್‌, ಸೆನ್‌ ಅಪರಾಧ ಠಾಣೆಯ ಇನ್‌ಸ್ಪೆಕ್ಟರ್‌ ಸೀತಾರಾಮ್‌, ಮಣಿಪಾಲ ಸಬ್‌ ಇನ್ಸ್‌ಸ್ಪೆಕ್ಟರ್‌ ಶ್ರೀಧರ ನಂಬಿಯಾರ್‌, ಪಡುಬಿದ್ರಿ
ಸಬ್‌ ಇನ್ಸ್‌ಸ್ಪೆಕ್ಟರ್‌ ಸುಬ್ಬಣ್ಣ, ಉಡುಪಿ ನಗರ ಸಬ್‌ ಇನ್ಸ್‌ಸ್ಪೆಕ್ಟರ್‌ ಸದಾಶಿವ ಗವರೋಜಿ, ಡಿ.ಸಿ.ಆರ್‌.ಬಿ. ಸಬ್‌ ಇನ್ಸ್‌ಸ್ಪೆಕ್ಟರ್‌ ಪ್ರಕಾಶ್‌, ಆಯುಷ್‌ ಸಂಸ್ಥೆಯ ಉಪಾಧ್ಯಕ್ಷ ಡಿ. ಮಾರುತಿ ಗೌಡ ಹಾಗೂ ಪೊಲೀಸ್‌ ಸಿಬ್ಬಂದಿ ಪಾಲ್ಗೊಂಡಿದ್ದರು.