ಉಡುಪಿ X press ವರದಿ ಪರಿಣಾಮ: ಎಚ್ಚೆತ್ತ ಜಿಲ್ಲಾಡಳಿತ,  ರಾಷ್ಟ್ರೀಯ ಹೆದ್ದಾರಿಯ ಪುತ್ತಿಗೆ ಸೇತುವೆ ದುರಸ್ತಿ ಕಾಮಗಾರಿ ಶುರು

 
ಉಡುಪಿ: ಮಲ್ಪೆ ಮೊಣಕಾಲ್ಮೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169A  ಯ ಹಿರಿಯಡ್ಕದ ಪುತ್ತಿಗೆ ಸಮೀಪದ ಸ್ವರ್ಣ ನದಿಗೆ ಅಡ್ಡಲಾಗಿ ಕಟ್ಟಿರುವ  ಪುತ್ತಿಗೆ ಸೇತುವೆ ಕುಸಿತದ ಹಾದಿಯಲ್ಲಿತ್ತು . ತಳ ಭಾಗದಲ್ಲಿ ಹಾಕಲಾಗಿದ್ದ ಆಧಾರವಾಗಿದ್ದ ಸ್ತಂಭಗಳು ಬೇರ್ಪಟ್ಟಿದ್ದವು, ಇದು ಇನ್ನೇನು ಕುಸಿದು ಬೀಳಲಿದೆ ಎನ್ನುವ ಎಚ್ಚರದ ವರದಿಯನ್ನು ಉಡುಪಿ xpress  11 ರಂದು “ರಾಷ್ಟ್ರಿಯ ಹೆದ್ದಾರಿ ಪುತ್ತಿಗೆ ಸೇತುವೆಯ ಕುತ್ತಿಗೆ ಉಳುಕಿದೆ” ಎನ್ನುವ ಶೀರ್ಷಿಕೆಯೊಂದಿಗೆ ಪ್ರಕಟಿಸಿತ್ತು.   ಇದೀಗ ವರದಿ ನೋಡುತ್ತಲೆ ಎಚ್ಚೆತ್ತ ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸೇತುವೆಯ ತಳಭಾಗದಲ್ಲಿ ಕುಸಿದಿದ್ದ ಆಧಾರ ಸ್ತಂಭದ  ಕೆಳಗೆ ಸಿಮೆಂಟ್ ಕಾಂಕ್ರೀಟ್  ಸರಳುಗಳಿಂದ  ಬೇರ್ಪಟ್ಟ ಸ್ಥಳವನ್ನು ಜೋಡಿಸಿದ್ದಾರೆ .ಆ ಮೂಲಕ ರಿಪೇರಿ ಕಾಮಗಾರಿ  ಶುರುವಾಗಿದೆ. 
 
1950 ರ ದಶಕದಲ್ಲಿ ನಿರ್ಮಾಣಗೊಂಡಿದ್ದ  ಈ ಸೇತುವೆಯು  ಕಳೆದ ವರ್ಷವಷ್ಟೆ ಮಳೆಗಾಲದ ಮುನ್ನ ದುರಸ್ತಿ ಗೊಂಡಿತ್ತು. ಆದರೆ  ಮಳೆಯ ಪ್ರವಾಹದಿಂದ  ಕೆಲವು ವಸ್ತುಗಳು ಕೊಚ್ಚಿ ಹೋಗಿತ್ತು.
ಈ  ಹೆದ್ದಾರಿಯಲ್ಲಿ ಸಾವಿರಾರು ವಾಹನಗಳು ಸಾಗುತಿದ್ದು ಹೆಬ್ರಿ ಆಗುಂಬೆ ಶಿವಮೊಗ್ಗ ದಾವಣಗೆರೆ ಚಿಕ್ಕಮಗಳೂರು ಜಿಲ್ಲೆಗಳನ್ನು ಜೋಡಿಸುವ ರಾಷ್ಟ್ರೀಯ ಹೆದ್ದಾರಿಯಿದು. ಮಳೆಗಾಲದ ಮಳೆಯ ಆರ್ಭಟ ಹಾಗೂ ಪ್ರವಾಹಕ್ಕೆ  ತುಂಬಿಕೊಂಡು ಹೋಗುವ ನೀರಿನ ವೇಗಕ್ಕೆ ಸೇತುವೆ ಆಧಾರ ಸ್ತಂಭಗಳು ಬಲಿಯಾಗುವ ಆತಂಕ ವ್ಯಕ್ತವಾಗಿದ್ದರಿಂದ ಇದೀಗ ಈ ರಿಪೇರಿ ಕಾಮಗಾರಿಗೆ ಜಿಲ್ಲಾಡಳಿತ ಚಾಲನೆ ನೀಡಿದೆ.
ಸೇತುವೆ ಕುಸಿತದ ಬಗ್ಗೆ  ಸಾಮಾಜಿಕ ಕಾರ್ಯಕರ್ತ ಸ್ಯಾಂ ಮಣಿಪಾಲ ಮಾಹಿತಿ ಒದಗಿಸಿದ್ದರು.
-ಚಿತ್ರ:ವರದಿ:
ರಾಮ್ ಅಜೆಕಾರ್