ಕುಂದಾಪುರ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಮತಯಾಚನೆ ನಡೆಸುವ ಸಲುವಾಗಿ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ರೋಡ್ ಶೋ ಗೆ ಚಾಲನೆ ನೀಡಿದರು.
ಕುಂದಾಪುರದ ಹೃದಯಭಾಗವಾದ ಶಾಸ್ತ್ರೀ ವೃತ್ತದಿಂದ ಆರಂಭಗೊಂಡ ಪಾದಯಾತ್ರೆ ಹೊಸ ಬಸ್ ನಿಲ್ದಾಣದ ಮಾರ್ಗವಾಗಿ ಮತ್ತೆ ಶಾಸ್ತ್ರೀ ವೃತ್ತದಲ್ಲಿ ಸಮಾಪನಗೊಂಡಿತು. ಪಾದಯಾತ್ರೆಗೆ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಪೋದಿ ಪರ ಘೋಷಣೆಗಳನ್ನು ಕೂಗಿ ಜೈಕಾರ ಹಾಕಿದರು.
ಈ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಈ ಭಾರಿ ಶೋಭಾ ಕರಂದ್ಲಾಜೆಯವರು ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಲಿದ್ದಾರೆ. ನನ್ನ ತಿರುಗಾಟ ಅನುಭವದ ಆಧಾರದಲ್ಲಿ ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳಲ್ಲಿ ನಿಶ್ಚಯವಾಗಿ ಇಪ್ಪತ್ತಮೂರು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ನಗು ಬೀರಲಿದೆ. ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಹಾಗೂ ತುಮಕೂರಿನಲ್ಲಿ ಬಿಜೆಪಿಯ ಬಸವರಾಜ್, ಹಾಸನದಲ್ಲಿ ಮಂಜು ಗೆಲ್ಲುತ್ತಾರೆ. ಈ ಬಾರಿ ನಿರೀಕ್ಷೆಗೂ ಮೀರಿದ ಅತ್ಯದ್ಭುತ ಫಲಿತಾಂಶ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಮುನ್ನೂರಕ್ಕೂ ಅಧೀಕ ಸೀಟುಗಳನ್ನು ಪಡೆದು ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಕಿರಣ್ ಕೊಡ್ಗಿ, ಭಾಸ್ಕರ ಬಿಲ್ಲ, ಶಂಕರ್ ಅಂಕದಕಟ್ಟೆ, ಸುನೀಲ್ ಹೇರಿಕುದ್ರು, ಸತೀಶ್ ಪೂಜಾರಿ ವಕ್ವಾಡಿ, ಗುಣರತ್ನಾ, ಶ್ರೀತಾ ಸುರೇಶ್, ಲಕ್ಷಮೀ ಮಂಜು ಬಿಲ್ಲ ಮೊದಲಾದವರು ಇದ್ದರು.