ಉಡುಪಿ: ತಿರುಗುತ್ತಿರುವ ಜಾಯಿಂಟ್ ವೀಲ್ ತುಂಡಾಗಿ ಮಕ್ಕಳು ಕೆಳಕ್ಕೆ ಬೀಳುವ ದೃಶ್ಯವುಳ್ಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಿನಗಳಿಂದ ವೈರಲ್ ಆಗಿತ್ತು. ಘಟನೆ ನಡೆದದ್ದು ಉಡುಪಿಯ ಕಲ್ಸಂಕದಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ಉಡುಪಿ ಉತ್ಸವದಲ್ಲಿ ಎನ್ನುವ ಸುಳ್ಳು ಸುದ್ದಿಗಳು ಎಲ್ಲೆಡೆ ಹಬ್ಬಿ ಜನತೆಯಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ ಉಡುಪಿ ಉತ್ಸವಕ್ಕೂ, ಈ ವಿಡಿಯೋಗೂ ಸಂಬಂಧವೇ ಇಲ್ಲ. ಇದು ಆಂದ್ರಪ್ರದೇಶದಲ್ಲಿ ಯಾವತ್ತೋ ನಡೆದಿದ್ದ ಘಟನೆಯಾಗಿದ್ದು ಉಡುಪಿ ಉತ್ಸವದಲ್ಲಿ ನಡೆದದ್ದಲ್ಲ ಎನ್ನುವ ಸತ್ಯ ಹೊರಬಿದ್ದಿದೆ. ಈ ಕುರಿತು ಉಡುಪಿ ಉತ್ಸವದ ನಿರ್ವಹಣಾ ಸಂಸ್ಥೆಯ ಮುಖ್ಯಸ್ಥರೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಜಿಲ್ಲಾ ಎಸ್. ಪಿ ಕೂಡ ಈ ಘಟನೆ ನಡೆದದ್ದು ಉಡುಪಿಯಲ್ಲಲ್ಲ ಎನ್ನುವ ಕುರಿತು ಸ್ಟಷ್ಟನೆ ನೀಡಿದ್ದಾರೆ.
ಉಡುಪಿ ಉತ್ಸವದ ವಿರುದ್ದ ಅಪ್ರಚಾರ?
ಕಳೆದ ೧೧ ವರ್ಷಗಳಿಂದ ಉಡುಪಿಯಲ್ಲಿ ಉಡುಪಿ ಉತ್ಸವವನ್ನು ಯಾವುದೇ ಕಳಂಕವಿಲ್ಲದೇ ನಡೆಸಿದ್ದೇವೆ. ಆದರೆ ಇದೀಗ ಎಲ್ಲೋ ನಡೆದ ವಿಡಿಯೋವನ್ನು ಉಡುಪಿ ಉತ್ಸವದಲ್ಲಿ ನಡೆದದ್ದು ಎನ್ನುವ ಸುಳ್ಳು ಸುದ್ದಿ ಹಬ್ಬಿ, ಉಡುಪಿ ಉತ್ಸವದ ವಿರುದ್ದ ಅಪ್ರಚಾರ ಮಾಡಲಾಗುತ್ತಿರುವುದು ವಿಷಾದನೀಯ ಎಂದು ಉತ್ಸವದ ಮುಖ್ಯಸ್ಥ ಗೌತಮ್ ಅಗರ್ ವಾಲ್ ತಿಳಿಸಿದ್ದಾರೆ.
ಈ ವಿಡಿಯೋ ಹಳೆಯದ್ದು?
ಆಂಧ್ರಪ್ರದೇಶದಲ್ಲಿ ಯಾವತ್ತೋ ನಡೆದ ಘಟನೆಯು ಈ ವಿಡಿಯೋದಲ್ಲಿದೆ. ಕಳೆದ ವರ್ಷವೂ ಈ ವಿಡಿಯೋ ವಾಟ್ಯ್ಸಾಪ್ ಗಳಲ್ಲಿ ಹರಿದಾಡಿತ್ತು. ಆದರೆ ಆಗ ಯಾರೂ ಉಡುಪಿ ಉತ್ಸವಕ್ಕೂ, ಆ ವಿಡಿಯೋಗೂ ಸಂಬಂಧ ಕಲ್ಪಿಸಿರಲಿಲ್ಲ. ಆದರೆ ಈಗ, ಯಾವುದೋ ರಾಜ್ಯದ ವಿಡಿಯೋವನ್ನು ನಮ್ಮ ರಾಜ್ಯದ್ದು ,ಉಡುಪಿ ಜಿಲ್ಲೆಯದ್ದು ಎಂದು ಆರೋಪಿಸುವುದು ಸರಿಯಲ್ಲ ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.
ಸುಳ್ಳು ಸುದ್ದಿ ಫಾರ್ವಡ್ ಮಾಡಬೇಡಿ : ಇದು ಉಡುಪಿ x ಪ್ರೆಸ್ ಕಾಳಜಿ:
ನಿಮಗೆ ಬರುವ ಫಾರ್ವಡೆಡ್ ವಿಡಿಯೋ, ಚಿತ್ರಗಳನ್ನು ದಯವಿಟ್ಟೂ ಸರಿಯಾಗಿ ಪರಿಶೀಲಿಸಿ, ಸಾಮಾನ್ಯವಾಗಿ ಹೆಚ್ಚಿನ ವಿಡಿಯೋಗಳು ಯಾವುದೋ ಉದ್ದೇಶಗಳಿಂದ ಕೂಡಿರುತ್ತದೆ. ಯಾರ ಮೇಲೋ ದ್ವೇಷ ಸಾಧಿಸಲು ಯಾರೋ ತಯಾರಿಸಿದ ವಿಡಿಯೋ ಅದಾಗಿರಬಹುದು. ಸೋ, ವಿಡಿಯೋಗಳನ್ನು ಫಾರ್ವಡ್ ಮಾಡುವ ಮೊದಲು ಅದು ನಿಜವೇ? ಸುಳ್ಳೇ? ಎನ್ನುವುದನ್ನು ಪರಿಶೀಲಿಸಿ. ಅಥವಾ ಅಂತಹ ವಿಡಿಯೋಗಳನ್ನು ಫಾರ್ವಡ್ ಮಾಡಬೇಡಿ. ಸುಳ್ಳು ಸುದ್ದಿ ಹರಡಿಸಿದ್ದಲ್ಲಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಲ್ಲಿ ನೀವೂ ಸಹಕರಿಸಿದಂತಾಗುತ್ತದೆ.