ಉಡುಪಿ: ಜಿಲ್ಲಾಡಳಿತದ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಆರ್ಟಿಓ,
ಲೋಕೋಪಯೋಗಿ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುವ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಹೇಳಿದರು.
ಅವರು ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್ ಇನ್
ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕರೆಗಳನ್ನು ಸ್ವೀಕರಿಸಿ ಮಾತನಾಡಿದರು.
ಅಪಘಾತಗಳ ಸಂಖ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ತೆಗೆದುಕೊಳ್ಳಬಹುದಾದ
ಕ್ರಮಗಳ ಬಗ್ಗೆ ಪಟ್ಟಿ ಮಾಡಲಾಗಿದೆ. ಈ ವರದಿಯನ್ನು ಪ್ರಾಧಿಕಾರ ಹಾಗೂ ಆರ್ಟಿಓಗೆ
ಸಲ್ಲಿಸಲಾಗಿದೆ. ಅದರಂತೆ ಈ ಬಗ್ಗೆ ಪ್ರಾಧಿಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.
ನಗರ ಠಾಣೆಯಲ್ಲಿ ಅಸಭ್ಯವಾಗಿ ವರ್ತಿಸುತ್ತಾರೆ :ದೂರು:
ಹಿರಿಯ ನಾಗರಿಕರೊಬ್ಬರು ಕರೆ ಮಾಡಿ ಉಡುಪಿ ನಗರ ಠಾಣೆಗೆ ಪಾಸ್ಪೊರ್ಟ್ ವಿಚಾರಣೆಗೆ ಹೋದಸಂದರ್ಭದಲ್ಲಿ ಪೊಲೀಸರು ಅಸಭ್ಯವಾಗಿ ವರ್ತಿಸಿದ್ದು, ಅಗೌರವದಿಂದ ನಡೆಸಿಕೊಂಡಿದ್ದಾರೆ.ಅವರ ಮೇಲೆ ಶಿಸ್ತು ಕ್ರಮ ಜರುಗಿಸಿ ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಈ ಸಂಬಂಧ ಠಾಣೆಯಲ್ಲಿ ಅಳವಡಿಸಲಾದ ಸಿಸಿಟಿವಿಯನ್ನು
ಪರಿಶೀಲನೆ ಮಾಡಲಾಗುವುದು. ಹಿರಿಯ ನಾಗರಿಕರೊಂದಿಗೆ ದುರ್ನಡತೆ ತೋರಿದ ಪೊಲೀಸ್
ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಅಲ್ಲದೆ,
ಈಗಾಗಲೇ ಪ್ರತಿ ಠಾಣೆಗಳಲ್ಲಿ ಸ್ವಾಗತಕಾರರ ನೇಮಕ ಮಾಡಲಾಗಿದ್ದು, ಅವರಿಗೆ ದೂರು ನೀಡಲು ಬರುವವರ ಜತೆಗೆ ಯಾವ ರೀತಿಯಾಗಿ ವರ್ತಿಸಬೇಕೆಂದು ತರಬೇತಿ ನೀಡಲಾಗುವುದು. ಇದರೊಂದಿಗೆ ಸಾರ್ವಜನಿಕರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸುವ ಕುರಿತಂತೆ ಪೊಲೀಸರಿಗೆ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಪರ್ಕಳ ಮೂಟೆಯಂತೆ ಮಕ್ಕಳನ್ನು ತುಂಬಿಸುವ ಆಟೋಗಳು:
ಪರ್ಕಳದಲ್ಲಿ ಶಾಲಾ ಟ್ರಿಪ್ ಮಾಡುವ ಆಟೊ ಚಾಲಕರು ಮತ್ತು ಮ್ಯಾಕ್ಸಿಕ್ಯಾಬ್ ಚಾಲಕರು
ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಮಕ್ಕಳನ್ನು ತುಂಬಿಸಿಕೊಂಡು ಸಂಚರಿಸುತ್ತಿದ್ದಾರೆ. ಈ
ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು. ಈ ಬಗ್ಗೆ ಸೂಕ್ತ ಕಾರ್ಯಾಚರಣೆ
ನಡೆಸಿ ಕ್ರಮ ಜರುಗಿಸುತ್ತೇವೆ ಎಂದು ಎಸ್ಪಿ ಹೇಳಿದರು.
ಕಾರ್ಕಳ ಕಾರ್ಮಿಕರಿಂದ ಕಿರಿಕಿರಿ:
ಕಾರ್ಕಳ ನಗರ ಠಾಣಾ ವ್ಯಾಪ್ತಿಯ ಬಸ್ ನಿಲ್ದಾಣದ ಸಮೀಪ ಇರುವ ಮಾರಿಗುಡಿ ದೇವಸ್ಥಾನದ
ಬಳಿ ಬೆಳ್ಳಂಬೆಳಿಗ್ಗೆ ಕೂಲಿ ಕಾರ್ಮಿಕರು ಕಿಕ್ಕಿರಿದು ಜಮಾಯಿಸುತ್ತಿದ್ದು, ಇದರಿಂದ
ಸಾರ್ವಜನಿಕರಿಗೆ ನಡೆದಾಡಲು ಸಮಸ್ಯೆ ಆಗುತ್ತಿದೆ ಎಂದು ದೂರು ನೀಡಿದರು. ಬೈಂದೂರು
ಠಾಣಾ ವ್ಯಾಪ್ತಿಯ ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಈ ಬಗ್ಗೆ
ಸೂಕ್ತ ಕ್ರಮಕೈಗೊಳ್ಳುವಂತೆ ಸಾರ್ವಜನಿಕರೊಬ್ಬರು ಎಸ್ಪಿಗೆ ಮನವಿ ಮಾಡಿದರು.
ಉಡುಪಿಯ ನಾರ್ತ್ ಶಾಲೆಯ ಬಳಿ ಅನಧಿಕೃತ ಬೋರ್ಡ್ಗಳನ್ನು ಅಳವಡಿಸಿರುವುದರಿಂದ
ಸಂಚಾರಕ್ಕೆ ತೊಂದರೆ ಆಗುತ್ತಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದರು. ದ್ವಿಚಕ್ರ ವಾಹನ
ಸವಾರರು ಹೈಬೀಮ್ ಲೈಟ್ ಉಪಯೋಗಿಸುತ್ತಿದ್ದಾರೆ. ಇದರಿಂದ ಇತರ ವಾಹನ ಸವಾರರಿಗೆ ವಾಹನ ಚಲಾಯಿಸಲು ತೊಂದರೆ ಆಗುತ್ತಿದೆ. ಒಳಕಾಡು ಶಾಲೆಯ ಬಳಿ ಶಾಲೆ ಬಿಡುವ ವೇಳೆಯಲ್ಲಿಯುವಕರು ದ್ವಿಚಕ್ರದಲ್ಲಿ ಬಂದು ಕೀಟಲೆ ನೀಡುತ್ತಿದ್ದಾರೆ ಎಂದು ದೂರು ನೀಡಿದರು.
ಇದಕ್ಕೆ ಉತ್ತರಿಸಿದ ಎಸ್ಪಿ, ಹೈಬೀಮ್ ಲೈಟ್ ಉಪಯೋಗಿಸುತ್ತಿರುವ ಬಗ್ಗೆ ರಾತ್ರಿ
ವೇಳೆ ವಿಶೇಷ ಕಾರ್ಯಾಚರಣೆ ನಡೆಸಿ, ಹೈಬೀಮ್ ಲೈಟ್ ಅಳವಡಿಸಿದವರ ವಿರುದ್ಧ ಸೂಕ್ತ
ಕ್ರಮ ಕೈಗೊಳ್ಳುತ್ತೇವೆ. ಅದೇ ರೀತಿ ಶಾಲಾ ವಿದ್ಯಾರ್ಥಿನಿಯರಿಗೆ ಕೀಟಲೆ ನೀಡುವ ಯುವಕರ
ವಿರುದ್ಧ ಕ್ರಮಕೈಗೊಳ್ಳಲು ರಾಣಿ ಅಬ್ಬಕ್ಕ ಪಡೆಯಿಂದ ವಿಶೇಷ ಕಾರ್ಯಾಚರಣೆ
ಮಾಡಲಾಗುವುದು ಎಂದು ತಿಳಿಸಿದರು.