ಸುಂದರ ನಾಳೆಗಳಿಗೆ ಹಸಿರಿನ ಉಸಿರು ನೀಡುವ ಉಡುಪಿಯ ಟೀಮ್ ಯುವ ಓಜಸ್

 ಉಡುಪಿ: ಇಂದು ನೆಟ್ಟ ಸಸಿ ನಾಳೆ ನೆರಳು.. ಒಂದು ಸಸಿಯನ್ನು ನೆಡುವುದೆಂದರೆ ಮಣ್ಣಿನಲ್ಲಿ ಕೇವಲ ಒಂದು ಗಿಡ ನೆಡುವುದಲ್ಲ, ಸುಂದರ ನಾಳೆಗಳಿಗೆ ಭರವಸೆಗಳನ್ನು ಬಿತ್ತುವುದು. ಅಂತಹ ಭರವಸೆಯನ್ನು ಬಿತ್ತುವ ಕೆಲಸವನ್ನು ಮಾಡುತ್ತಿದೆ ಉಡುಪಿಯ ಟೀಮ್ ಯುವ ಓಜಸ್ ಹೌದು ಹಸಿರ ಕನಸುಗಳನ್ನು ಕಾಣುವ ಟೀಮ್ ಯುವ ಓಜಸ್, ಸುತ್ತಲೂ ಹಸಿರು ಮೂಡಿಸಲು ಶ್ರಮಿಸುತ್ತಿದೆ. ಹಸಿರೇ ಇಂದು, ನಾಳೆಗಳಿಗೆ ಉಸಿರು ನೀಡುತ್ತದೆ ಎನ್ನುವ ಅರಿವನ್ನು ಮೂಡಿಸುತ್ತಿದೆ.

ಗಿಡ ನೆಡುವುದು ಕೇವಲ ಒಂದು ದಿನದ ಕಾರ್ಯಕ್ರಮವಾಗಬಾರದು; ಅದನ್ನು ಬೆಳೆಸುವುದು ನಮ್ಮ ನಿರಂತರ ಜವಾಬ್ದಾರಿಯಾಗಬೇಕು ಎನ್ನುವುದು ಉಡುಪಿಯ ಟೀಮ್ ಯುವ ಓಜಸ್ ತಂಡದ ಉದ್ದೇಶ. ಒಂದು ಪುಟ್ಟ ಗಿಡಕ್ಕೆ ದೊಡ್ಡ ಕನಸಿದೆ ಎನ್ನುವುದನ್ನು ಎಲ್ಲೆಡೆ ಅರ್ಥಮಾಡಿಸುತ್ತ, ಗಿಡಗಳನ್ನು ನೆಡುತ್ತ ಹಸಿರಾಗಿಸುವುದೇ ಈ ತಂಡದ ದೊಡ್ಡ ಕನಸು.

ಇತ್ತೀಚೆಗೆ ಟೀಮ್ ಯುವ ಓಜಸ್ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ದಿ 26 ರಂದು ಉಡುಪಿಯ ಬೋರ್ಡ್ ಹೈಸ್ಕೂಲ್ನಲ್ಲಿ ಹಮ್ಮಿಕೊಳ್ಳಲಾಯಿತು. ಗಿಡ ನೆಡುವುದು ಮಾತ್ರವಲ್ಲ, ನೆಟ್ಟ ಗಿಡಗಳನ್ನು ಒಣಗದಂತೆ ನಿರ್ವಹಣೆ ಕೂಡ ಮಾಡುತ್ತದೆ ಈ ತಂಡ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಮೃತಕಲಾ ಸಿ ಎಸ್, ಮಾಜಿ ಬಾಲ ನ್ಯಾಯ ಮಂಡಳಿ  ಸದಸ್ಯರು, ಮತ್ತು ಹಿರಿಯ ನ್ಯಾಯವಾದಿಗಳು ಸರಕಾರಿ ಪ.ಪೂ.ಕಾಲೇಜು ಗುಡ್ಡಿಮನೆ ಉಡುಪಿ ಇಲ್ಲಿನ ಪ್ರಿನ್ಸಿಪಾಲ್  ನಾಗರಾಜ್ ಗುಡ್ಡಿಮನೆ ಉಡುಪಿ, ಹೈಸ್ಕೂಲ್ ವಿಭಾಗದ ಪ್ರಾಂಶುಪಾಲರಾದ ಭಾಗೀರತಿ, ಸ್ಪೋರ್ಟ್ಸ್ ಕನ್ನಡ ಚಾನೆಲ್ ನ ರಾಮಕೃಷ್ಣ ಆಚಾರ್, ಉಡುಪಿ express ನ್ಯೂಸ್ ನ ಸ್ವರೂಪ್ ಶ್ರೀಯಾನ್, ರೂಟ್ಸ್ ಇನ್ಸ್ಟಿಟ್ಯೂಟ್ ನ ರಾಕೇಶ್ ಶೆಟ್ಟಿಗಾರ್, ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಪರಮೇಶ್ವರ್ ಹಾಗೂ ಟೀಮ್ ಯುವ ಓಜಸ್ ತಂಡದ ಸದಸ್ಯರಾದ ಸೃಜನ್ ಕುಮಾರ್ ,ಅಭಿಜಿತ್ ಕರ್ಕ್ಕುಂಜೆ, ಸಂದೇಶ್ ಭಂಡಾರಿ ಪ್ರಜ್ವಲ್ ಶೆಟ್ಟಿ ಉಪಸ್ಥಿತರಿದ್ದರು.