ಉಡುಪಿ: ನಗರಸಭೆಯ ಕಸ ವಿಲೇವಾರಿ ಕಾರ್ಮಿಕನ ಮೇಲಿನ ಹಲ್ಲೆ ಖಂಡಿಸಿ ಹಾಗೂ ನಗರಸಭೆಯ ದುರಾಡಳಿತ ನಡೆಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಉಡುಪಿ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ನಗರಸಭೆ ಪೌರಕಾರ್ಮಿಕರಿಗೆ ಭದ್ರತೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಕಾರ್ಮಿಕನ ಮೇಲೆ ಹಲ್ಲೆ ನಡೆದಾಗ ಕೇಸ್ ದಾಖಲಿಸಲು ಹಿಂದೇಟು ಹಾಕಿದೆ. ಈಗ ಹಲ್ಲೆ ನಡೆಸಿದ ಆರೋಪಿಗಳ ಅಂಗಡಿಯ ಲೈಸನ್ಸ್ ರದ್ದು ಪಡಿಸುವ ಮೂಲಕ ನಾವು ದೊಡ್ಡ ಕ್ರಮ ಕೈಗೊಂಡಿದ್ದೇವೆ ಎಂದು ಬೊಬ್ಬೆ ಹಾಕುತ್ತಿದ್ದಾರೆ. ಇದು ತೋರಿಕೆಗಾಗಿ ಮಾಡಿರುವ ಕ್ರಮ, ನಗರಸಭೆಗೆ ಕಾರ್ಮಿಕರ ಮೇಲೆ ಕಾಳಜಿ ಇಲ್ಲ ಎಂದು ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಆರೋಪಿಸಿದರು.
ನಗರಸಭೆ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸತ್ತವರ ಹೆಸರಿನಲ್ಲಿ ಆರೋಗ್ಯ ಕಾರ್ಡ್, ಮೀಸಲು ಹಣ ದುರುಪಯೋಗ ಪಡಿಸುತ್ತಿದೆ. ಕಸ ವಿಲೇವಾರಿಯ ಕೆಲಸ ಎಲ್ಲ ವಾರ್ಡ್ಗಳಲ್ಲಿ ಸಮಾನವಾಗಿ ಹಂಚಿಕೆಯಾಗಿಲ್ಲ. ನಷ್ಟ ಭರಿಸುವಂತಹ ವಾರ್ಡ್ಗಳನ್ನು ಬಡ ಮಹಿಳಾ ಸ್ವಸಹಾಯ ಗುಂಪುಗಳಿಗೆ ನೀಡಿ ಅನ್ಯಾಯ ಮಾಡಿದೆ ಎಂದು ದೂರಿದರು.
ಸಂಘಟನಾ ಸಂಚಾಲಕ ಶ್ಯಾಮ್ರಾಜ್ ಬಿರ್ತಿ, ಸಂಘಟನಾ ಸಂಚಾಲಕರಾದ ಪರಮೇಶ್ವರ ಉಪ್ಪೂರು, ಮಂಜುನಾಥ ಬಾಳ್ಕುದ್ರು, ಮುಖಂಡರಾದ ಶಿವಾನಂದ ಮೂಡಬೆಟ್ಟು, ಶಂಕರ ಚೇಂಡ್ಕಳ, ಸುಂದರಿ ಪುತ್ತೂರು, ನಗರಸಭೆ ಸದಸ್ಯ ರಮೇಶ್ ಕಾಂಚನ್, ತಾಪಂ ಸದಸ್ಯೆ ಡಾ.ಸುನೀತಾ ಶೆಟ್ಟಿ, ಪ್ರೊ.ಸಿರಿಲ್ ಮಥಾಯಸ್, ಹುಸೇನ್ ಕೋಡಿಬೆಂಗ್ರೆ, ಕಾಂಗ್ರೆಸ್ ಮುಖಂಡರಾದ ಜನಾರ್ದನ ಭಂಡಾರ್ಕರ್, ಗಣೇಶ್ ನೆರ್ಗಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.