ಉಡುಪಿ: ಪ್ರತಿದಿನ ವ್ಯಾಯಾಮ, ನಿಯಮಿತ ಆಹಾರ ಸೇವನೆ ಹಾಗೂ ಆಗಾಗ ವೈದ್ಯಕೀಯ
ಪರೀಕ್ಷೆಗೆ ಒಳಗಾಗುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಹೇಳಿದರು.
ವಿಶ್ವ ಮಧುಮೇಹ (ಡಯಾಬಿಟಿಸ್) ದಿನದ ಅಂಗವಾಗಿ ಆದರ್ಶ ಆಸ್ಪತ್ರೆ, ಜಿಲ್ಲಾಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ಎನ್ಸಿಡಿ ಘಟಕ ಹಾಗೂ ಪಿಪಿಸಿ ಕಾಲೇಜಿನ ಸಹಯೋಗದಲ್ಲಿ ಅಜ್ಜರಕಾಡಿನಲ್ಲಿ ಭಾನುವಾರ ಆಯೋಜಿಸಿದ್ದ ಬೃಹತ್ ಮಧುಮೇಹ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಧುಮೇಹ ಮನುಷ್ಯನನ್ನು ನಿಧಾನವಾಗಿ ಕೊಲ್ಲುವ ರೋಗ. ಇದು ದೇಹದ ಅಂಗಾಂಗಗಳ ಮೇಲೆ ದುಷ್ಪಾರಿಣಾಮ ಬೀರುತ್ತದೆ. ಹಾಗಾಗಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದರ ಜತೆಗೆ ರೋಗ ಬರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಇಂದು ಮಧುಮೇಹದಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿದ್ದು, ಚಿಕ್ಕ ಮಕ್ಕಳಲ್ಲಿ ಕಂಡು ಬರುತ್ತಿರುವುದು ಬಹಳ ಆತಂಕಕಾರಿಯಾದ ವಿಷಯವಾಗಿದೆ. ಹಾಗಾಗಿ ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದರ ಮೂಲಕ ಈ ಕಾಯಿಲೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದಾಗಿದೆ ಎಂದರು.
ಜಿಪಂ ಅಧ್ಯಕ್ಷ ದಿನಕರ ಬಾಬು, ಸದಸ್ಯೆ ಗೀತಾಂಜಲಿ ಸುವರ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶೋಕ್, ಜಿಲ್ಲಾ ಆಸ್ಪತ್ರೆಯ ಸರ್ಜನ್ ಮಧುಸೂದನ್ ನಾಯಕ್, ಡಿಸಿಸಿ ಬ್ಯಾಂಕ್ನ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ, ಬಂಟಕಲ್ಲು ತಾಂತ್ರಿಕ ಕಾಲೇಜಿನ ಕಾರ್ಯದರ್ಶಿ ರತ್ನಕುಮಾರ್, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.
ಅಜ್ಜರಕಾಡಿನಲ್ಲಿ ಆರಂಭಗೊಂಡ ಜಾಗೃತಿ ಜಾಥವು ಜೋಡುಕಟ್ಟೆ, ಡಯಾನ ಸರ್ಕಲ್, ಕೆ.ಎಂ. ಮಾರ್ಗವಾಗಿ ಸಾಗಿ ಬಂದು ಆದರ್ಶ್ ಆಸ್ಪತ್ರೆಯಲ್ಲಿ ಮುಕ್ತಾಯಗೊಂಡಿತು. ವಿವಿಧ ನರ್ಸಿಂಗ್ ಕಾಲೇಜುಗಳ ಸುಮಾರು 2 ಸಾವಿರ ವಿದ್ಯಾರ್ಥಿಗಳು ಜಾಥದಲ್ಲಿ ಭಾಗವಹಿಸಿದ್ದರು. ಮಧುಮೇಹದ ಕುರಿತ ಬಿತ್ತಿಪತ್ರಗಳನ್ನು ಹಿಡಿದುಕೊಂಡ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಭಾರತದಲ್ಲಿ ಹೆಚ್ಚುತ್ತಿದೆ ಮಧುಮೇಹಿಗಳ ಸಂಖ್ಯೆ:
ವ್ಯಾಯಾಮ ಇಲ್ಲದ ಜೀವನ, ಅಸಮರ್ಪಕ ಆಹಾರ ಕ್ರಮ, ಒತ್ತಡದ ಬದುಕು ಇದೆಲ್ಲವೂ ಮಧುಮೇಹಕ್ಕೆ ಪ್ರಮುಖ ಕಾರಣಗಳಾಗಿವೆ. ಚೀನಾ ದೇಶ ಬಳಿಕ ಅತೀ ಹೆಚ್ಚು ಮಧುಮೇಹಿಗಳನ್ನು ಹೊಂದಿರುವ ದೇಶ ಭಾರತ ಆಗಿದೆ. 7 ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದು, ಸುಮಾರು 7 ಕೋಟಿಯಷ್ಟು ಜನರು ಮಧುಮೇಹದ ಆರಂಭಿಕ ಹಂತದಲ್ಲಿ ಇದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಆದರ್ಶ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಜಿ.ಎಸ್.
ಚಂದ್ರಶೇಖರ್ ಆತಂಕ ವ್ಯಕ್ತಪಡಿಸಿದರು.












