ಕಾರ್ಮಿಕರಿಂದ ಸಂಸದರ ಕಚೇರಿ ಚಲೋ ಪತ್ರಿಭಟನೆ  ಸಾಮಾಜಿಕ ಸುರಕ್ಷಾ ಸಂಹಿತೆ ಕಾಯ್ದೆ ಹಿಂಪಡೆಯಲು ಆಗ್ರಹ  

ಉಡುಪಿ: ಕೇಂದ್ರ ಸರ್ಕಾರವು 44 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ, ಹೊಸದಾಗಿ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರನ್ನೊಳಗೊಂಡ ಸಾಮಾಜಿಕ ಸುರಕ್ಷಾ ಸಂಹಿತೆ ಮಸೂದೆಯನ್ನು ಜಾರಿಗೆ ತರಲು ಹೊರಟಿದೆ. ಇದರಿಂದ 1996ರಲ್ಲಿ ಜಾರಿಯಾದ ಕಟ್ಟಡ ಕಾರ್ಮಿಕ ಕಾನೂನು ಹಾಗೂ ಸೆಸ್‌ ಕಾನೂನುಗಳೆರಡು ರದ್ದಾಗಲಿದ್ದು, ಕಟ್ಟಡ ಕಾರ್ಮಿಕರು ಕಲ್ಯಾಣ ಮಂಡಳಿಯ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ ಎಂದು ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಮನ್ವಯ ಸಮಿತಿಯ ಸುರೇಶ್‌ ಕಲ್ಲಾಗರ ದೂರಿದರು.
ಕಟ್ಟಡ ಕಾರ್ಮಿಕ ಕಾನೂನು-1996 ಅನ್ನು ಉಳಿಸಿ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕರ ಬದುಕನ್ನು ರಕ್ಷಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ಗುರುವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಎದುರು ಹಮ್ಮಿಕೊಂಡಿದ್ದ ಉಡುಪಿ—ಚಿಕ್ಕಮಗಳೂರು ಸಂಸದರ ಕಚೇರಿ ಚಲೋ ಪತ್ರಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ದೇಶದ ಕೋಟ್ಯಾಂತರ ಕಟ್ಟಡ ನಿರ್ಮಾಣ ಕಾರ್ಮಿಕರು ಹಲವು ವರ್ಷಗಳಿಂದ ಹೋರಾಟ ನಡೆಸಿ ಗಳಿಸಿದ ಕಾನೂನುಗಳನ್ನು ಮತ್ತು ಅದರಡಿ ಸಿಗುತ್ತಿದ್ದ ಸೌಲಭ್ಯಗಳನ್ನು ಇಲ್ಲದಂತೆ ಮಾಡುವುದು ಈ ಹೊಸ ಕಾಯ್ದೆಯ ಉದ್ದೇಶವಾಗಿದೆ. ಹಾಗಾಗಿ ಇದರ ವಿರುದ್ಧ ಕಾರ್ಮಿಕರೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು. ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು.
ಇದು ಕಾರ್ಮಿಕರನ್ನು ಮರಳು ಮಾಡುವ ಯೋಜನೆಯಾಗಿದೆ. ಇದರಿಂದ ಕಾರ್ಮಿಕರಿಗೆ ಯಾವುದೇ ಪ್ರಯೋಜನವಿಲ್ಲ. ಕೇಂದ್ರ ಸರ್ಕಾರ ಕಟ್ಟಡ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ. ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತಬೇಕಾದ ಜನಪ್ರತಿನಿಧಿಗಳು ಪ್ರಜ್ಞಾಹೀನರಾಗಿದ್ದಾರೆ. ಹಾಗಾಗಿ ಸಾವಿರಾರು ಕಟ್ಟಡ ಕಾರ್ಮಿಕರು ಸಹಿ ಸಂಗ್ರಹ ಮಾಡಿ ಸಂಸದರ ಮೂಲಕ ಕೇಂದ್ರ ಸರ್ಕಾರಕ್ಕೆ ತಮ್ಮ ಬೇಡಿಕೆಯನ್ನು ತಿಳಿಸಬೇಕು ಎಂದರು.
ಕಟ್ಟಡ ಕಾರ್ಮಿಕ ಕಾನೂನು ಹಾಗೂ ಸೆಸ್‌ ಕಾನೂನುಗಳ ಅಡಿಯಲ್ಲಿ ದೇಶದಾದ್ಯಂತ 2 ಕೋಟಿಕ್ಕಿಂತಲೂ ಅಧಿಕ ಕಾರ್ಮಿಕರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ರಾಜ್ಯದಲ್ಲಿ 2006ರಲ್ಲಿ ರಚನೆಯಾದ ಕಲ್ಯಾಣ ಮಂಡಳಿಯಲ್ಲಿ ಸುಮಾರು 3 ಲಕ್ಷಕ್ಕಿಂತ ಅಧಿಕ ಕಾರ್ಮಿಕರು ಸೇರ್ಪಡೆಯಾಗಿದ್ದಾರೆ. ಇದರಲ್ಲಿ ಸಂಗ್ರಹವಾಗಿರುವ 7500 ಕೋಟಿ ಹಣದಲ್ಲಿ ಕಾರ್ಮಿಕರು ಪಿಂಚಣಿ, ಮದುವೆ, ಶೈಕ್ಷಣಿಕ, ವೈದ್ಯಕೀಯ ಹಾಗೂ ಹೆರಿಗೆ ಸೌಲಭ್ಯ ಸೇರಿದಂತೆ ಸುಮಾರು 10 ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಆದರೆ ಸರ್ಕಾರ ಹೊಸ ಕಾನೂನು ಜಾರಿಗೊಳಿಸಿದರೆ ಈ ಎಲ್ಲ ಸೌಲಭ್ಯಗಳಿಂದ ಕಾರ್ಮಿಕರು ವಂಚಿತರಾಗಬೇಕಾಗುತ್ತದೆ. ಅಲ್ಲದೆ ಯಾವುದೇ ಭದ್ರತೆ ಇಲ್ಲದೆ ಕಾರ್ಮಿಕರು ಬೀದಿಗೆ ಬರಬೇಕಾಗಬಹುದು ಎಂದು ಹೇಳಿದರು.
ಕೇಂದ್ರ ಸರ್ಕಾರವು ಕಾರ್ಮಿಕರ ಕಲ್ಯಾಣಕ್ಕಾಗಿ ರೂಪಿಸಲಾದ 44 ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತಂದು, ಅದನ್ನು ಮಾಲೀಕರ ಪರವಾಗಿ ರೂಪಿಸಲು ಹೊರಟಿದೆ. ಇದರಿಂದ ಕಾರ್ಮಿಕರು ತಮ್ಮ ಎಲ್ಲ ಹಕ್ಕುಗಳನ್ನು ಕಳೆದುಕೊಳ್ಳಲಿದ್ದು, ಸವಲತ್ತುಗಳಿಂದ ವಂಚಿತರಾಗುತ್ತಾರೆ ಎಂದು ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ ಹೇಳಿದರು.
ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಕಟ್ಟಡ ಕಾರ್ಮಿಕರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಸಾಮಾಜಿಕ ಸುರಕ್ಷಾ ಸಂಹಿತೆ ಕಾಯ್ದೆಯನ್ನು ಹಿಂಪಡೆಯಬೇಕು ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಕಾನೂನು—1996 ಅನ್ನು ಉಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಸಂಘದ ಪದಾಧಿಕಾರಿಗಳಾದ ಶೇಖರ ಬಂಗೇರ, ಯು.ದಾಸ. ಭಂಡಾರಿ, ಜಗದೀಶ್‌ ಆಚಾರ್‌ ಹೆಮ್ಮಾಡಿ, ದಯಾನಂದ ಕೋಟ್ಯಾನ್‌, ಗಣೇಶ್‌ ನಾಯ್ಕ್‌ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.