ಉಡುಪಿ ನ್ಯಾಯಾಲಯದಲ್ಲಿ ಶೇ. 50ಕ್ಕಿಂತ ಹೆಚ್ಚು ಮಂದಿ ಮಹಿಳಾ ಸಿಬ್ಬಂದಿ ಇದ್ದು, ಶೇ. 30ಕ್ಕಿಂತಲೂ ಹೆಚ್ಚು ಮಹಿಳಾ ವಕೀಲರಿದ್ದಾರೆ. ರಾಜ್ಯದಲ್ಲೂ ಶೇ. 30ಕ್ಕಿಂತ ಹೆಚ್ಚು ಮಹಿಳೆಯರು ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಲಿಂಗ ಸಮಾನತೆಯ ಅನುಷ್ಠಾನದಲ್ಲಿ ನಾವು ಅನೇಕ ಹೆಜ್ಜೆಗಳನ್ನು ಇಟ್ಟಿದ್ದು, ದೇಶದ ಸಂವಿಧಾನ ಹಾಗೂ ಕಾನೂನುಗಳು ಕೂಡ ಈ ದಿಸೆಯಲ್ಲಿ ಹಿಂದೆ ಬಿದ್ದಿಲ್ಲ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಸಿ.ಎಂ. ಜೋಶಿ ಹೇಳಿದರು.
ಉಡುಪಿ ವಕೀಲರ ಸಂಘ ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಉಡುಪಿ ನ್ಯಾಯಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಿಂಗ ಸಮಾನತೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುವ ಜವಾಬ್ದಾರಿ ನಮ್ಮ ಮೇಲಿದೆ. ಆ ನಿಟ್ಟಿನಲ್ಲಿ ನಾವು ಪರಿಪೂರ್ಣವಾಗಿ ಯಶಸ್ಸು ಸಾಧಿಸುವ ಅಗತ್ಯವಿದೆ ಎಂದರು.
ಹಿಂದೆ ಮಹಿಳಾ ವಕೀಲರ ಸಂಖ್ಯೆ ತುಂಬಾ ಕಡಿಮೆ ಇತ್ತು. ಆದರೆ ಈಗ ನ್ಯಾಯಾಂಗದಲ್ಲಿ ಮಹಿಳೆಯರ ಸಂಖ್ಯೆ ಏರಿಕೆಯಾಗಿದೆ. ದೇಶದ ರಾಷ್ಟ್ರಪತಿ, ಪ್ರಧಾನಿ ಹುದ್ದೆ ಅಥವಾ ರಾಕೆಟ್ ಉಡಾವಣೆ ಈ ಮೊದಲಾದ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಸಾಧನೆಯನ್ನು ಈಗಾಗಲೇ ತೋರಿಸಿದ್ದಾರೆ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟದಲ್ಲಿಯೂ ಮಹಿಳೆಯರು ಮುಂಚೂಣಿಯಲ್ಲಿದ್ದರು. ಸಮಾಜದಲ್ಲಿ ಮಹಿಳೆಯರ ಪಾತ್ರ ಏನೆಂಬುವುದನ್ನು ದೇಶದ ಈವರೆಗಿನ ಸಾಧನೆಗಳು ತೋರಿಸುತ್ತವೆ. ಕೆಲವು ಪ್ರಾಮುಖ್ಯತೆ ಪಡೆದ ಕ್ಷೇತ್ರಗಳಲ್ಲಿ ಮಹಿಳೆಯರು ಕೆಲಸ ಮಾಡಬಹುದು ಎನ್ನುವಂತಹ ಸ್ಥಿತಿಯನ್ನು ಇಂದು ನಿರ್ಮಾಣ ಮಾಡಲು ಸಾಧ್ಯವಾಗಿದೆ. ಆದರೆ ಇದು ಎಲ್ಲ
ಕ್ಷೇತ್ರಗಳಲ್ಲಿ ಆಗಿಲ್ಲ. ಸೇನೆಯಲ್ಲಿ ಮಹಿಳೆಯರಿಗೆ ಇನ್ನೂ ಅವಕಾಶ ಸಿಕ್ಕಿಲ್ಲ. ಹಾಗಾಗಿ ನಾವು ಕಾರ್ಯಸಾಧನೆ ಮಾಡಬೇಕಾದದ್ದು ಇನ್ನೂ ಇದೆ ಎಂಬುವುದನ್ನು ಮರೆಯುವಂತಿಲ್ಲ ಎಂದು ಅಭಿಪ್ರಾಯಪಟ್ಟರು.
ಮಂಗಳೂರಿನ ಸೆಂಟರ್ ಫಾರ್ ಡೆವಲಪ್ಮೆಂಟ್ ಸ್ಟಡಿಸ್ ಆ್ಯಂಡ್ ಎಜುಕೇಶನ್ ನಿರ್ದೇಶಕಿ ಡಾ. ರೀಟಾ ನೊರೊನ್ಹ ಮಾತನಾಡಿದರು.
ನ್ಯಾಯಾಧೀಶರಾದ ಲಾವಣ್ಯ, ಭವಾನಿ, ನಿರ್ಮಲ, ಹಿರಿಯ ಸರ್ಕಾರಿ ಅಭಿಯೋಜಕಿ ಶಾಂತಿ ಬಾಯಿ, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕಿ ಜ್ಯೋತಿ ನಾಯಕ್, ವಕೀಲರ ಸಂಘದ ಅಧ್ಯಕ್ಷ ದಿವಾಕರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರೊನಾಲ್ಡ್ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.
ಹಿರಿಯ ವಕೀಲೆ ಗೀತಾ ಕೌಶಿಕ್ ಸ್ವಾಗತಿಸಿದರು. ವಕೀಲರಾದ ನಿಶ್ಮಿತಾ ಸಿ. ಸನಿಲ್ ಮತ್ತು ಕೆ. ದೀಪಾ ಕಾರ್ಯಕ್ರಮ ನಿರೂಪಿಸಿದರು.












