ಉಡುಪಿ: ಪ್ರಿಯಕರನೊಬ್ಬ ಅಸ್ವಸ್ಥಗೊಂಡ ತನ್ನ ಪ್ರೇಯಸ್ಸಿಯನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ನಾಪತ್ತೆಯಾಗಿದ್ದು, ಇದೀಗ ಆ ಯುವತಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ಕೊಳಲಗಿರಿ ನಿವಾಸಿ ರಕ್ಷಿತಾ ನಾಯಕ್ ಮೃತಪಟ್ಟ ಯುವತಿ. ಈಕೆಯನ್ನು ಪ್ರಿಯಕರ ಜಡ್ಕಲ್ ಮೂಲದ ಪ್ರಶಾಂತ್ ಆಸ್ಪತ್ರೆ ತಂದು ಬಿಟ್ಟು ಹೋಗಿದ್ದಾನೆ ಎನ್ನಲಾಗಿದೆ.
ಶನಿವಾರ ತಡರಾತ್ರಿ ಪ್ರಶಾಂತ್ ತೀವ್ರವಾಗಿ ಅಸ್ವಸ್ಥಗೊಂಡಿದ್ದ ರಕ್ಷಿತಾಳನ್ನು ನಗರದ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದನು. ಅಲ್ಲದೆ, ಈ ವಿಚಾರವನ್ನು ರಕ್ಷಿತಾಳ ಮನೆಯವರಿಗೂ ತಿಳಿಸಿದ್ದನು. ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪ್ರಿಯಕರ ಪ್ರಶಾಂತ್ ಪರಾರಿಯಾಗಿದ್ದಾನೆ. ಈತನ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇವರಿಬ್ಬರು ಅಂಬಾಗಿಲಿನ ಬಳಿ ಮನೆ ಬಾಡಿಗೆ ಪಡೆದುಕೊಂಡು ವಾಸಿಸುತ್ತಿದ್ದರು. ಪ್ರಶಾಂತ್ ಮಣಿಪಾಲ ಬಳಿಯ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದನು ಎನ್ನಲಾಗಿದೆ.
ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಿಯಕರ ಪ್ರಶಾಂತ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಪ್ರಶಾಂತ್ ಪತ್ತೆಯಾದ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.