ಉಡುಪಿ ವಿಶ್ವಕರ್ಮ ಸೇವಾ ಸಂಘದ ಮಹಾಸಭೆ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಉಡುಪಿ: ವಿಶ್ವಕರ್ಮ ಸೇವಾ ಸಂಘ ಮತ್ತು ಕಾಳಿಕಾಂಬಾ ಮಹಿಳಾ ಮಂಡಳಿಯ ಪ್ರಸಕ್ತ ಸಾಲಿನ ವಾರ್ಷಿಕ ಮಹಾಸಭೆ ಭಾನುವಾರ ಉಡುಪಿ ಚಿಟ್ಪಾಡಿಯ ವಿಶ್ವಕರ್ಮ ಸೇವಾ ಸಂಘದ ಕಟ್ಟಡದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿ ವಕೀಲ ಮಾಧವ ಆಚಾರ್ಯ ಅವರು ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಹಿರಿಯರು ನಡೆಸಿಕೊಂಡು ಬಂದಂತಹ ಆಚಾರ ವಿಚಾರಗಳನ್ನು ನಾವೂ ಮುಂದುವರೆಸಿಕೊಂಡು ಹೋಗಬೇಕು. ಅದು ನಮಗೆ ಶ್ರೀರಕ್ಷೆಯಾಗಿ ನಮ್ಮನ್ನು ಕಾಪಾಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನ ಮಾಡಲಾಯಿತು.

ವಿಶ್ವಕರ್ಮ ಸೇವಾ ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಟಪಾಡಿಯ ಪುರೋಹಿತ್ ಶಶಿಧರ್ ಆಚಾರ್ಯ, ವಿಶ್ವಕರ್ಮ ಸೇವಾ ಸಂಘದ ಗೌರವಾಧ್ಯಕ್ಷ ಶೇಖರ ಆಚಾರ್ಯ, ಜನಾರ್ದನ ಎಸ್, ಸತೀಶ್, ಮಹೇಶ್, ರಾಜೇಶ್ ಎಸ್, ಶ್ರೀ ಕಾಳಿಕಾಂಬಾ ಮಹಿಳಾ ಮಂಡಳಿ ಚಿಟ್ಪಾಡಿ ಇದರ ಅಧ್ಯಕ್ಷೆ ಯಶೋಧಾ ಜಿ. ಆಚಾರ್ಯ, ಉಪಾಧ್ಯಕ್ಷೆ ಅಕ್ಷತಾ ಸುಧಾಕರ ಆಚಾರ್ಯ, ಗೌರವಾಧ್ಯಕ್ಷೆ ಉಷಾ ಭಾಸ್ಕರ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಜ್ಯೋತಿ ಗಣೇಶ್ ಆಚಾರ್ಯ ಹಾಗೂ ಗಂಗಾಧರ ಆಚಾರ್ಯ ಮುನಿಯಾಲು, ಹರೀಶ್ ಉಪ್ಪೂರು ಮೊದಲಾದವರು ಉಪಸ್ಥಿತರಿದ್ದರು.