ಉಡುಪಿ: ವಿಶ್ವಪ್ರಸನ್ನ ತೀರ್ಥರಿಂದ ನೀಲಾವರ ಗೋಶಾಲೆಗೆ ಪಾದಯಾತ್ರೆ

ಉಡುಪಿ: ಪ್ರತಿ ವರ್ಷದಂತೆ ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿಯ ನೇತೃತ್ವದಲ್ಲಿ ಭಾನುವಾರ ಉಡುಪಿ ಕೃಷ್ಣಮಠದಿಂದ ನೀಲಾವರದ ಗೋ ಶಾಲೆಯವರೆಗೆ ಪಾದಯಾತ್ರೆ ನಡೆಯಿತು.
ಕೃಷ್ಣಮಠದ ಚಂದ್ರಶಾಲೆಯಲ್ಲಿ ಸ್ವಾಮೀಜಿಗಳ ಶ್ರೀಮಧ್ಭಾಗವತ ಪುರಾಣ ಪ್ರವಚನದೊಂದಿಗೆ ಪಾದಯಾತ್ರೆ ಆರಂಭಗೊಂಡಿತು. ಬಳಿಕ ಪಾದೆಯಾತ್ರೆಯ ಮಾರ್ಗದಲ್ಲಿ ಸಿಗುವ ಕಲ್ಯಾಣಪುರದ ಮಡಿಮಲ್ಲಿಕಾರ್ಜುನ ದೇವಳದಲ್ಲಿ, ಹೇರೂರು ಮಹಾಲಿಂಗೇಶ್ವರ ದೇವಳದಲ್ಲಿ ತಲಾ ಅರ್ಧ ತಾಸು ಭಾಗವತ ಪ್ರವಚನ ನೀಡಿದರು. ಇಂದು ಬೆಳಿಗ್ಗೆ 7ಗಂಟೆಗೆ ಆರಂಭಗೊಂಡ ಪಾದಯಾತ್ರೆ ಸಂಜೆ 4ಗಂಟೆಗೆ ನೀಲಾವರ ಗೋಶಾಲೆಯನ್ನು ತಲುಪಿತು. ಗೋಶಾಲೆಯಲ್ಲಿ ಕೃಷ್ಣಪೂಜೆ ದೀಪಾರಾಧನೆ ಬಳಿಕ ಶ್ರೀಪಾದರು ಉಪಾಹಾರ ಸೇವಿಸುವುದರೊಂದಿಗೆ ಪಾದಯಾತ್ರೆ ಮುಕ್ತಾಯಗೊಂಡಿತು.
ಪಾದೆಯಾತ್ರೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಗೋಶಾಲೆಯಲ್ಲಿ ಇದೇ 16ರ ವರೆಗೆ ವಿದ್ವಾಂಸರು ಭಾಗವತ ಸಪ್ತಾಹ ನಡೆಸಿಕೊಡುವರು. ಪ್ರತಿದಿನ ಪ್ರವಚನದ ಬಳಿಕ ಸಂಸ್ಥಾನ ಪೂಜೆ, ತೀರ್ಥ ಪ್ರಸಾದ ಹಾಗೂ ಸಂಜೆ ಗೋಸೇವೆ ನಡೆಯಲಿದೆ. 16ರಂದು ಭಾಗವತ ಸಪ್ತಾಹದ ಮಂಗಲೋತ್ಸವ ನೆರವೇರಲಿದೆ.