ಉಡುಪಿ: ಸಾರಿಗೆ ಆಯುಕ್ತರ ಆದೇಶ ಹಾಗೂ ಮೋಟಾರ್ ವಾಹನ ಕಾಯ್ದೆ ಮತ್ತು ನಿಯಮಯಾನುಸಾರ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರಯಾಣಿಕ ವಾಹನಗಳನ್ನು (ಬಸ್, ಮ್ಯಾಕ್ಸಿಕ್ಯಾಬ್ ಮತ್ತು ಟ್ಯಾಕ್ಸಿ ) ಅನುಪಯುಕ್ತತೆಗಾಗಿ ವಾಹನದ ಮೂಲ ದಾಖಲಾತಿಗಳೊಂದಿಗೆ ಆರ್ ಟಿಒ ಕಚೇರಿಗೆ ಒಪ್ಪಿಸಿ ಅನುಪಯುಕ್ತತೆಯಲ್ಲಿದೆ ಎಂದು ಘೋಷಿಸಲ್ಪಟ್ಟಿದ್ದಾರೆ. ಅಂತಹ ವಾಹನಗಳನ್ನು ಆರ್ ಟಿಓದ ಅನುಮತಿ ಇಲ್ಲದೆ ಉಪಯೋಗಿಸಿದರೆ ಭಾರೀ ದಂಡದೊಂದಿಗೆ ಉಳಿದಿರುವ ತೆರಿಗೆಯನ್ನು ಕಡ್ಡಾಯವಾಗಿ ಕಟ್ಟಬೇಕಾಗುತ್ತದೆ ಎಂದು ಉಡುಪಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಎಚ್ಚರಿಕೆ ನೀಡಿದ್ದಾರೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಆರ್ ಟಿಒಗೆ ಒಪ್ಪಿಸಿರುವ ವಾಹನಗಳನ್ನು ಅರ್ಜಿ ಸಲ್ಲಿಸಿ ಅನುಮತಿ ಪಡೆದ ಬಳಿಕವೇ ಉಪಯೋಗಿಸಬೇಕು. ಜೂನ್ 30ರೊಳಗೆ ವಾಹನದ ಬಾಕಿ ತೆರಿಗೆಯನ್ನು ಪಾವತಿಸದೆ, ವಿನಾಯಿತಿಯನ್ನು ಪಡೆಯದೆ ಅಥವಾ ಪೂರ್ವನುಮತಿಯಿಲ್ಲದೆ ವಾಹನವನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಬಳಸಿದ್ದೇ ಆದಲ್ಲಿ ಕಚೇರಿಯ ವಿಶೇಷ ತಪಾಸಣೆ ವೇಳೆ ಸಿಲುಕಿದಲ್ಲಿ ಭಾರೀ ದಂಡದೊಂದಿಗೆ ಉಳಿಕೆ ತೆರಿಗೆಯನ್ನು ಕಡ್ಡಾಯವಾಗಿ ಕಟ್ಟಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಬಸ್ ನಲ್ಲಿ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಮತ್ತು ಡ್ರೈವರ್ ಹಾಗೂ ಕಂಡಕ್ಟರ್ ಕೋವಿಡ್ ಲಸಿಕೆ ಪಡೆದಿರಬೇಕು ಎಂದು ಹೇಳಿದ್ದಾರೆ.